ಕಾಂಗ್ರೆಸ್ ಗೂಂಡಾಗಿರಿಗೆ ರಾಜ್ಯದಲ್ಲಿ ಅವಕಾಶವಿಲ್ಲ: ಬಿ.ವೈ.ವಿಜಯೇಂದ್ರ

IMG-20210315-WA0009
Published on

ಶಿವಮೊಗ್ಗ: ಕಾಂಗ್ರೆಸ್​ ಮಾಡುವ ಗೂಂಡಾಗಿರಿಗೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಗುಡುಗಿದರು.

ಭದ್ರಾವತಿಯ ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ್ ಅವರ ಮನೆಗೆ ಭೇಟಿ ನೀಡಿ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರೊಂದಿಗೆ ಮಾತನಾಡಿದ  ಅವರು, ಕಾರ್ಯಕರ್ತರ ಬೆನ್ನಹಿಂದೆ ನಾವಿದ್ದೇವೆ. ಯಾರೂ ಹೆದರಬೇಕಿಲ್ಲ ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್​ ಪಕ್ಷ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಕೆಟ್ಟ ಸಂಸ್ಕೃತಿಯಿಂದ ಕೂಡಿರುವ ಕಾಂಗ್ರೆಸ್ ನಾಯಕರಿಗೆ ಒಳ್ಳೆಯದು ಯಾವುದೂ ಕಣ್ಣಿಗೆ ಕಾಣುವುದಿಲ್ಲ. ಜೈ ಶ್ರೀರಾಮ್​ ಘೋಷಣೆ ಕೂಗಿದ ಬಿಜೆಪಿಗರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ ಎಂದು ದೂರಿದರು.

ಭದ್ರಾವತಿಯಲ್ಲಿ ಕಾಂಗ್ರೆಸ್ ಶಾಸಕರು ಮತ್ತು ಅವರ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಭದ್ರಾವತಿ ಶಾಸಕರ ನೇತೃತ್ವದಲ್ಲಿ ತುಘಲಕ್​ ದರ್ಬಾರ್​ ನಡೆದಿದೆ. ಕಾಂಗ್ರೆಸ್​ ಪಕ್ಷ‌ ಅದನ್ನು ಬೆಂಬಲಿಸಿ ತನ್ನ ಅಸ್ತಿತ್ವ ಹುಡುಕುತ್ತಿದೆ.ಕಾಂಗ್ರೆಸ್ ನವರ ಗೂಂಡಾಗಿರಿಗೆ ಇಲ್ಲಿ ಅವಕಾಶ ಇಲ್ಲ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ. ಶ್ರೀನಾಥ್, ಧರ್ಮಪ್ರಸಾದ್, ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ, ಒಳಚರಂಡಿ ನಿಗಮದ ನಿರ್ದೇಶಕ ರುದ್ರೇಶ್ ಮಂಗೋಟೆ, ಸೂಡಾ ಸದಸ್ಯರಾದ ಕದಿರೇಶ್,  ರಾಮಲಿಂಗಯ್ಯ, ಹಟ್ಟಿ ಚಿನ್ನದ ಗಣಿ ನಿರ್ದೇಶಕ ಕೂಡ್ಲಿಗೆರೆ ಹಾಲೇಶ್, ಪ್ರಮುಖರಾದ ಆನಂದ ಸೇರಿ ಇನ್ನಿತರ ನಾಯಕರು ಮತ್ತು ಮಂಡಲದ ಎಲ್ಲ ಮೋರ್ಚಾದ ಪದಾಧಿಕಾರಿಗಳು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net