

ಮಳವಳ್ಳಿ: ಪಟ್ಟಣದ ಮಂಟೇಸ್ವಾಮಿ ಮಠದ ಬೀದಿಯಲ್ಲಿರುವ ಭದ್ರಕಾಳಮ್ಮ ಹಾಗೂ ಶ್ರೀ ವೀರಭದ್ರಸ್ವಾಮಿ ದಿವ್ಯ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಮುಂಜಾನೆಯಿಂದ ಅರ್ಚಕ ವರ್ಗದವರು ದೇವಾಲಯದಲ್ಲಿ ಹೋಮ-ಹವನಗಳನ್ನು ನಡೆಸಿ ವೀರಭದ್ರಸ್ವಾಮಿ ಮೂರ್ತಿಗೆ ಪಂಚಾಮೃತ, ಕ್ಷೀರ, ಜೇನುತುಪ್ಪ ಸೇರಿದಂತೆ ಹಲವು ಅಭಿಷೇಕಗಳನ್ನು ನೆರವೇರಿಸಿದರು. ನಂತರ ವಿವಿಧ ಹೂಗಳಿಂದ ದೇವರಮೂರ್ತಿಯನ್ನು ಅಲಂಕರಿಸಿ ಮಹಾಮಂಗಳಾರತಿ ಅರ್ಪಿಸಿದರು.
ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸರದಿಯಲ್ಲಿ ನಿಂತು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಮಧ್ಯಾಹ್ನ 1.10 ರಿಂದ 2 ಗಂಟೆಗೆ ಸಂದ ವೃಶ್ಚಿಕ ಲಗ್ನದಲ್ಲಿ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಸಿಂಗರಿಸಲಾಗಿದ್ದ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಇದೇ ವೇಳೆ ಮಂಗಳ ವಾದ್ಯದೊಡನೆ ವೀರಭದ್ರ ಕುಣಿತದೊಡನೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಭಕ್ತರು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ನೆರೆದ ಭಕ್ತಸಮೂಹಕ್ಕೆ ಪ್ರಸಾದ ವಿನಿಯೋಗ ಮಾಡಲಾಗಿತ್ತು.