

ಹೊಸದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ಸ್ಥಗಿತಗೊಂಡಿರುವ ತುಮಕೂರು ನಾಲಾ ಕಾಮಗಾರಿಯನ್ನು ಸ್ಥಳೀಯ ರೈತರನ್ನು ವಿಶ್ವಾಸಕ್ಕೆ ಪಡೆದು ಮರು ಆರಂಭಿಸುವಂತೆ ಶಾಸಕ ಬಿ.ಜಿ.ಗೋವಿಂದಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಅಜ್ಜಂಪುರ ಸಮೀಪದ ಗೌರಾಪುರ - ಸೋಲಾಪುರ ನಡುವೆ ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರದ ಹಣ ವಿತರಣೆಯಾಗದೆ ಕಾಮಗಾರಿ ಸ್ಥಗಿತವಾದ ಹಿನ್ನೆಲೆಯಲ್ಲಿ ಅಜ್ಜಂಪುರ ತಾಲೂಕಿನ ವೈ ಜಂಕ್ಷನ್‌ಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು.
ಕಾಮಗಾರಿಗೆ ಅಡ್ಡಿಯಾದ ಅಂಶಗಳ ಕುರಿತು ಅಧಿಕಾರಿಗಳು ಹಾಗೂ ಸ್ಥಳೀಯ ರೈತರ ಜತೆ ಸರಣಿ ಸಭೆ ನಡೆಸಿದ ಬಳಿಕ ಅಲ್ಲಿ ವ್ಯಕ್ತವಾದ ಅಭಿಪ್ರಾಯ ಆಧರಿಸಿ ಮೊದಲು ಸೂಕ್ತ ಪರಿಹಾರ ನೀಡಲು ತಿಳಿಸಿದರು.
ನಾಲೆ ಹಾದು ಹೋಗುವ ಪ್ರದೇಶದಲ್ಲಿ ಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಪರಿಹಾರ ನಿಗದಿ ಆಗಿದ್ದರೂ ಹಣ ಬಿಡುಗಡೆ ಆಗದಿರುವುದೇ ಈ ಸಮಸ್ಯೆಗೆ ಮೂಲ.
ಮುಂದಿನ ವಾರ 50 ಕೋಟಿ ರೂ. ಬಿಡುಗಡೆ ಆಗುತ್ತಿದ್ದು ಆಯಾ ರೈತರ ಖಾತೆಗೆ ಜಮೆ ಆಗಲಿದೆ ಎಂದು ಮಾಹಿತಿ ನೀಡಿದರು.
ಈ ಸಂಬಂಧ ವಿಶ್ವೇಶ್ವರಯ್ಯ ಜಲನಿಗಮದ ಅಧಿಕಾರಿಗಳ ಜತೆ ಚರ್ಚಿಸಿದಾಗ ಅವರು ಕೂಡ ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಕೆಲಸ ಶುರು ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯೋಜನೆ ಪೂರ್ಣಗೊಂಡರೆ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದರು.
ಕಡೂರು ಶಾಸಕ ಆನಂದ್, ವಿಶ್ವೇಶ್ವರಯ್ಯ ಜಲನಿಗಮದ ಎಂಡಿ ಸಣ್ಣಚಿತ್ತಯ್ಯ, ಮುಖ್ಯ ಇಂಜಿನಿಯರ್ ಕೆ.ಎಂ.ಶಿವಪ್ರಕಾಶ, ಅಧಿಕ್ಷಕ ಇಂಜಿನಿಯರ್, ಎಫ್.ಎಚ್. ಲಮಾಣಿ, ಎಇಇ ಹರ್ಷ, ಸುರೇಶ್ ಇತರರಿದ್ದರು.