

ಹರಿಹರ: ತಾಲೂಕಾದ್ಯಂತ ವಾಡಿಕೆಗಿಂತ ಶೇ.71ರಷ್ಟು ಮಳೆ ಕೊರತೆಯಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.
ವಾಡಿಕೆಯಂತೆ 81ಮಿಮೀ. ಮಳೆಯಾಗಬೇಕಿತ್ತು. ಆದರೆ ಕೇವಲ 24 ಮಿಮೀ. ಮಳೆಯಾಗಿದ್ದು ಶೇ.71ರಷ್ಟು ಮಳೆ ಕೊರತೆಯುಂಟಾಗಿದೆ.
ತಾಲೂಕಿನಲ್ಲಿ ಒಟ್ಟಾರೆ 6627 ಹೆಕ್ಟೇರ್‌ನಲ್ಲಿ ಮಳೆಯಾಧಾರಿತ ಬೆಳೆ ಬೆಳೆಯಲಾಗುತ್ತದೆ. ಆದರೆ ಈ ಬಾರಿ ಮಳೆ ಕೊರತೆ ಹಿನ್ನೆಲೆ ಶೇ.50ರಷ್ಟು ಇಳುವರಿ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ.
ತಾಲೂಕಿನ ಜಿ.ಟಿ.ಕಟ್ಟೆ, ಕೊಪ್ಪ, ರಾಜನಹಳ್ಳಿ, ಹೊಸಳ್ಳಿ, ರಾಮತೀರ್ಥ, ನಾಗೇನಹಳ್ಳಿ, ಡಿ.ಬಿ.ಕೆರೆ ಹಾಗೂ ಕೊಂಡಜ್ಜಿ ಗ್ರಾಪಂ ವ್ಯಾಪ್ತಿಯೂ ಸೇರಿದಂತೆ ಇತರೆ ಗ್ರಾಮಗಳ 6040 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, 75 ಹೆ.-ಆವರೆ ಆಲಸಂದಿ, 32 ಹೆ.-ಸೋಯಾಬಿನ್, 410 ಹೆ.-ತೊಗರಿಬೇಳೆ, 20ಹೆ.-ಜೋಳ, 45 ಹೆ.-ರಾಗಿಯನ್ನು ಬಿತ್ತನೆ ಮಾಡಲಾಗಿದೆ. ಮಳೆಯ ಅಭಾವ ದಿಂದ ಶೇ.50ರಷ್ಟು ಮಾತ್ರ ಫಸಲು ಬರುವ ನಿರೀಕ್ಷೆ ಇದೆ.
23700 ಹೆಕ್ಟೇರ್ ಭದ್ರಾ ಆಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿದ್ದು, ಡ್ಯಾಂ ನಿಂದ ನೀರನ್ನು ತಡವಾಗಿ ಬಿಟ್ಟ ಪರಿಣಾಮ ಇದುವರೆಗೂ 18600 ಹೆ.ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಕೊನೆ ಭಾಗದ ರೈತರಿಗೆ ನೀರು ಲಭಿಸದ ಹಿನ್ನೆಲೆಯಲ್ಲಿ ಆ ಭಾಗದ ರೈತರು ಬಿತ್ತನೆ ಮಾಡಲಿಲ್ಲ.
ಆತಂಕ ಸೃಷ್ಟಿಸಿದ ಭದ್ರಾ ನೀರಿನ ಮಟ್ಟ:
ಸದ್ಯದ ಭದ್ರಾ ಡ್ಯಾಂ ನೀರಿನ ಮಟ್ಟ ತಾಲೂಕಿನ ರೈತರಲ್ಲಿ ಆತಂಕ ಮೂಡಿಸಿದೆ.
ಮಳೆ ಹಾಗೂ ಭದ್ರಾ ನೀರಿನ ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ತಾಲೂಕಿನಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಸದ್ಯಕ್ಕೆ ಪರಿಸ್ಥಿತಿಯಲ್ಲಿ ಯಾವುದೇ ಕೊರತೆಯಿಲ್ಲ.
ಮಳೆಯ ಕೊರತೆ ಪರಿಣಾಮ ಮೆಕ್ಕಜೋಳ ಬೆಳೆ ನೀರಿಲ್ಲದೆ ಒಣಗುತ್ತಿವೆ. ಕೊಳವೆ ಬಾವಿಯಲ್ಲಿ ನೀರಿನ ಮಟ್ಟ ಕುಸಿದಿವೆ. ಬಿತ್ತನೆಗಾಗಿ ಮಾಡಿದ ಸಾಲ ಮೈಮೇಲಾಗಲಿದೆ ಎನ್ನುವ ಭೀತಿಯಲ್ಲಿದ್ದೇವೆ. ಸರ್ಕಾರ ಕೂಡಲೇ ಪರಿಹಾರ ನೀಡುವ ಕಡೆ ಗಮನಹರಿಸಬೇಕು.
ಜಿ.ಕುಮಾರ್, ಗಂಗನರಸಿ ರೈತ