

ಅಜ್ಜಂಪುರ: ಜಿಲ್ಲೆಯಲ್ಲಿ ತರೀಕೆರೆ ಹಾಗೂ ಅಜ್ಜಂಪುರ ತಾಲೂಕಿಗೆ ಅತಿಹೆಚ್ಚು 26 ಕೋಟಿ ರೂ. ಹೆಚ್ಚುವರಿ ಸಾಲ ನೀಡಲಾಗಿದೆ. ಜಿಲ್ಲೆಯ ಪ್ರತಿಯೊಂದು ಸಹಕಾರ ಬ್ಯಾಂಕ್ಗಳಿಗೆ ತಾರತಮ್ಯ ಮಾಡದೆ ಅರ್ಹ ಫಲಾನುಭವಿ ರೈತರಿಗೆ ಸಾಲ ನೀಡಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಡಿ.ಎಸ್.ಸುರೇಶ್ ಹೇಳಿದರು.
ಅಜ್ಜಂಪುರದಲ್ಲಿ ಶುಕ್ರವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ರೈತರಿಗೆ ಹೆಚ್ಚುವರಿ ಸಾಲ ಹಾಗೂ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಚೆಕ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಹಕಾರ ಸಂಘಗಳ ದಾಸ್ತಾನು ಕೊಠಡಿ ನಿರ್ವಣಕ್ಕೆ ಸಾಲ ನೀಡಲಾಗುವುದು. ಸಹಕಾರ ಸಂಘಗಳು ಜನೌಷಧ ಕೇಂದ್ರ ತೆರೆಯಲು ಸರ್ಕಾರ ಅವಕಾಶ ಕಲ್ಪಿಸಿದೆ. ಇದರಿಂದ ಗ್ರಾಮೀಣ ಜನರಿಗೆ ಕಡಿಮೆ ಬೆಲೆಗೆ ಔಷಧ ಸಿಗಲಿದೆ. ನಾನು ಪ್ರಥಮ ಬಾರಿಗೆ ಶಾಸಕನಾದಾಗ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಅಜ್ಜಂಪುರಕ್ಕೆ ಭದ್ರಾ ಡ್ಯಾಂನಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರಾರಂಭಿಸಲಾಗಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು ಏಪ್ರಿಲ್ನಲ್ಲಿ ಅಜ್ಜಂಪುರ ಜನತೆಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು.
ಜಿಪಂ ಸದಸ್ಯ ಕೆ.ಆರ್.ಆನಂದಪ್ಪ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ದ್ವೇಷ ರಾಜಕಾರಣ ಮಾಡದೆ ರೈತರ ಅಭಿವೃದ್ಧಿ ದೃಷ್ಟಿಯಿಂದ ಕಾರ್ಯನಿರ್ವಹಿಸಬೇಕು. ಹೈನುಗಾರಿಕೆಗೆ ಉತ್ತೇಜನ ನೀಡಲು ಸಾಲ ಸೌಲಭ್ಯ ಹಾಗೂ ಹಾಲು ಉತ್ಪಾದಕರ ಸಂಘಗಳ ಅಭಿವೃದ್ಧಿಗೆ ಉತ್ತೇಜನ ನೀಡಲಾಗುವುದು ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಶಂಬೈನೂರು ಆನಂದಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಟಿ.ಎಲ್.ರಮೇಶ್, ಪಿಸಿಎಆರ್ಡಿ ಬ್ಯಾಂಕ್ ಅಧ್ಯಕ್ಷರಾದ ಮಲ್ಲಿಕಾರ್ಜುನ್, ಉಪಾಧ್ಯಕ್ಷ ನಾಗರಾಜು, ಎಪಿಎಂಸಿ ಅಧ್ಯಕ್ಷ ಕುಮಾರ್, ತಾಪಂ ಸದಸ್ಯ ಕೃಷ್ಣಪ್ಪ, ಅಜ್ಜಂಪುರ ಪಪಂ ಅಧ್ಯಕ್ಷರಾದ ಚನ್ನಬಸಮ್ಮ ಇತರರಿದ್ದರು.