

ಶಿರಸಿ: ಸಾಹಿತಿ, ದಿ. ಪ್ರೊ.ಬಿ.ಎಚ್. ಶ್ರೀಧರ ಅವರ ಕುರಿತಾಗಿ ರಚಿತವಾದ ದೆಹಲಿ ಸಾಹಿತ್ಯ ಅಕಾಡೆಮಿ ಪ್ರಕಟಿತ ಕೃತಿಯನ್ನು ನಗರದ ಆರಾಧನಾ ಸಭಾಂಗಣದಲ್ಲಿ ಗುರುವಾರ ಹಿರಿಯ ಸಾಹಿತಿ ಶಾ.ಮಂ. ಕೃಷ್ಣರಾಯ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಸಾಹಿತ್ಯ ಕ್ಷೇತ್ರಕ್ಕೆ ಬಿ.ಎಚ್. ಶ್ರೀಧರ ಅಮೂಲ್ಯ ಕೊಡುಗೆ ನೀಡಿ ಜನಮಾನಸದಲ್ಲಿ ಜೀವಂತವಾಗಿದ್ದಾರೆ. ಪ್ರಸ್ತುತ ಸಾಕಷ್ಟು ಕವಿಗಳು, ಸಾಹಿತಿಗಳು, ಲೇಖಕರು, ಚಿತ್ರಕಲಾವಿದರು ಹೀಗೆ ಪ್ರತಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರನ್ನು, ಮಾಡಿದವರು ಅಲಕ್ಷಿತವಾಗುತ್ತಿದ್ದಾರೆ. ಅವರನ್ನು ಗುರುತಿಸುವ ಕೆಲಸ ಆಗಬೇಕು ಎಂದರು.
ಕೃತಿಕಾರ ಎಲ್.ಎಸ್. ಶಾಸ್ತ್ರಿ ಮಾತನಾಡಿ, ಕಳೆದ ನಾಲ್ಕು ವರ್ಷಗಳ ಪ್ರಯತ್ನ, ಬಿ.ಎಚ್. ಶ್ರೀಧರ ಅವರ 56ಪುಸ್ತಕಗಳ ಅಧ್ಯಯನದೊಂದಿಗೆ 104ಪುಟಗಳ ಕೃತಿ ರಚಿಸಲಾಗಿದೆ. ಅಕಾಡೆಮಿ ನೀಡಿದ ಸೀಮಿತ ಅವಕಾಶದಲ್ಲಿ ಕೃತಿ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ 300ಕ್ಕೂ ಹೆಚ್ಚಿನ ಪುಟದ ಕೃತಿ ರಚನೆಯ ಗುರಿ ಹೊಂದಲಾಗಿದೆ ಎಂದರು.
ಶ್ರೀಧರ ಅವರ ವಿಸ್ತಾರವಾದ ವಿಷಯ ವ್ಯಾಪ್ತಿ ನೋಡಿದರೆ ಅರಗಿಸಿಕೊಳ್ಳಲು ಆಗುವುದಿಲ್ಲ. ಆದರೆ ಕನ್ನಡ ಸಾಹಿತ್ಯದಲ್ಲಿ ಅವರನ್ನು ನಡೆಸಿಕೊಂಡ ರೀತಿ ಸರಿ ಇದೆಯಾ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಕೃತಿ ಕುರಿತು ಮಾತನಾಡಿದ ಡಾ.ಎಂ.ಜಿ. ಹೆಗಡೆ, ವಿವಿಧ ಕ್ಷೇತ್ರಗಳಲ್ಲಿ ಬಿ.ಎಚ್. ಶ್ರೀಧರರು ಸಾಹಿತ್ಯ ರಚಿಸಿದ್ದರು. ಓದುಗರನ್ನು ಸಮಾನವಾಗಿ ಪರಿಗಣಿಸುತ್ತಿದ್ದರು. ಕ್ರಿಯೆಯಲ್ಲಿ ಸಾರ್ಥಕತೆ ಕಂಡ ಪಂಡಿತರಾಗಿದ್ದರು. ವಿಷಯವನ್ನು ನೇರ ಹಾಗೂ ಸ್ಪಷ್ಟವಾಗಿ ಹೇಳುತ್ತಿದ್ದರು. ನಮ್ಮ ಸಾಹಿತ್ಯ ಪರಂಪರೆ ಮುಂದಿಟ್ಟು ದೇಶಕ್ಕೆ ಏನು ಬೇಕು ? ಎಂಬುದನ್ನು ಅವರು ಪ್ರಚುರಪಡಿಸಿದ್ದರು ಎಂದರು.
ಸಿ.ಆರ್.ಶಾನಭಾಗ ನಿರೂಪಿಸಿದರು. ರಾಜಶೇಖರ ಹೆಬ್ಬಾರ, ಬ್ರಹ್ಮಾನಂದ ಹೆಬ್ಬಾರ, ರೇಖಾ ಹೆಬ್ಬಾರ ನಿರ್ವಹಿಸಿದರು.