ಹಲವು ಕ್ಷೇತ್ರದಲ್ಲಿ ಮಂಡ್ಯ ಮಾದರಿ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಬಣ್ಣನೆ

BH Mange Gowda Farmer, Education Award
Published on

ಮಂಡ್ಯ: ಕೃಷಿ, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ ಹಾಗೂ ಜಾನಪದ ಸೇರಿದಂತೆ ಹಲವು ಕ್ಷೇತ್ರದಲ್ಲಿ ಮಂಡ್ಯ ಮಾದರಿಯಾಗಿದೆ. ಮಾತ್ರವಲ್ಲದೆ ತಾಯಿ ಹೃದಯದ ಗುಣ ಜಿಲ್ಲೆಯಲ್ಲಿ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.

ನಗರದ ಕರ್ನಾಟಕ ಸಂಘದ ಆವರಣದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘದಿಂದ ಆಯೋಜಿಸಿದ್ದ ಗಾಂಧಿವಾದಿ ಬಿ.ಎಚ್.ಮಂಗೇಗೌಡ ಕೃಷಿಕ, ಶಿಕ್ಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಬಿ.ಎಚ್.ಮಂಗೇಗೌಡ ಅವರು ಅಪ್ಪಟ ಗಾಂಧಿವಾದಿಯಾಗಿ ಬದುಕು ಸಾಗಿಸಿದವರು. ತಮ್ಮ ಜೀವನದಲ್ಲಿ ಸಮರ್ಪಣಾ ಮನೋಭಾವ ಹೊಂದಿದ್ದರು. ಪ್ರಪಂಚವೇ ಅನುಸರಿಸಬಹುದಾದ ಎಲ್ಲ ಆದರ್ಶಗಳನ್ನು ಮಹಾತ್ಮ ಗಾಂಧೀಜಿ ಅವರು ಜಗತ್ತಿಗೆ ಬಿಟ್ಟು ಹೋಗಿದ್ದಾರೆ. ಅಂತಹ ಆದರ್ಶಗಳನ್ನು ಅಳವಡಿಸಿಕೊಂಡು ಜನ್ಮವನ್ನು ಸಾರ್ಥಕವಾಗಿ ಶಕ್ತಿ ತುಂಬುವ ಕೆಲಸ ಮಾಡಲು ತಿಳಿಸಿದರು.

ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಶಿಕ್ಷಣ ಸಂಸ್ಥೆಯಿಂದ ಹಣ ಪಡೆಯುವ ಇಂತಹ ಕಾಲಘಟ್ಟದಲ್ಲಿ ಕೃಷಿ ಮಾಡಿ ಬೆಳೆ ಬೆಳೆದು ಮಾರಾಟದ ಹಣದಲ್ಲಿ ಬಿ.ಎಚ್.ಮಂಗೇಗೌಡ ಅವರು ಶಿಕ್ಷಕರಿಗೆ ವೇತನ ನೀಡುತ್ತಿದ್ದರು. ಕೃಷಿ ಮಂಗೇಗೌಡರ ಬದುಕಾಗಿತ್ತು. ಅಂತೆಯೇ ಶಿಕ್ಷಣ ಅವರ ನೆಚ್ಚಿನ ಕ್ಷೇತ್ರವಾಗಿತ್ತು. ಇಲ್ಲಿ ಉಚಿತ ಶಿಕ್ಷಣ ಪಡೆದವರ ಪೈಕಿ ಹಲವರು ದೇಶ ವಿದೇಶದಲ್ಲಿ ಬದುಕು ರೂಪಿಸಿಕೊಂಡಿದ್ದಾರೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಮಾಜಿ ಶಾಸಕ ಎಂ.ಶ್ರೀನಿವಾಸ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಬೆಕ್ಕಳಲೆ ಗ್ರಾಮ ವಿದ್ಯಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬಿ.ಎಂ.ರಘು ಇತರರಿದ್ದರು.

ಇದೇ ವೇಳೆ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕು ದೊಡ್ಡ ಇಂದುವಾಡಿ ಗ್ರಾಮದ ಡಾ.ಎಸ್.ದತ್ತೇಶ್‌ಕುಮಾರ್ ಅವರಿಗೆ ‘ಬಿ.ಎಚ್.ಮಂಗೇಗೌಡ ಶಿಕ್ಷಣ’ ಹಾಗೂ ಮದ್ದೂರು ತಾಲೂಕು ತೈಲೂರು ಗ್ರಾಮದ ಪ್ರಗತಿಪರ ಕೃಷಿಕ ಟಿ.ಎಸ್.ರಾಜು ಅವರಿಗೆ ‘ಬಿ.ಎಚ್.ಮಂಗೇಗೌಡ ಕೃಷಿಕ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇಬ್ಬರಿಗೆ ತಲಾ 10 ಸಾವಿರ ರೂ ನಗದು ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net