

ವಿಜಯವಾಣಿ ಸುದ್ದಿಜಾಲ ಮಂಗಳೂರು
ಬಡವರು ಹಾಗೂ ಅತ್ಯಂತ ಬುದ್ಧಿವಂತ ಮಕ್ಕಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಒದಗಿಸುವ ಪ್ರತ್ಯೇಕ ಶಿಕ್ಷಣ ಸಂಸ್ಥೆಗಳನ್ನು ಶ್ರೀ ಆದಿಚುಂಚನಗಿರಿ ಮಠದ ವತಿಯಿಂದ ಮಂಗಳೂರು ಸಹಿತ ದೇಶದ ವಿವಿಧೆಡೆ ಆರಂಭಿಸಲಾಗುವುದು ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ರಜತ ಮಹೋತ್ಸವ ಪ್ರಯುಕ್ತ ಕಾವೂರಿನ ಬಿಜಿಎಸ್ ಸಭಾಂಗಣದಲ್ಲಿ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳ 25 ಸಾಧಕರಿಗೆ ಬಿಜಿಎಸ್ ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.
ಆರ್ಥಿಕವಾಗಿ ಹಿಂದುಳಿದಿರುವ ಬುದ್ಧಿವಂತ ಮಕ್ಕಳಿಗೆ ಆರನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೆ ಶಿಕ್ಷಣ ನೀಡುವ ಶಾಲೆಗಳನ್ನು ಶೀಘ್ರ ಸ್ಥಾಪಿಸಲಾಗುವುದು. ಈ ಶಾಲೆಗೆ ಅರ್ಜಿ ಹಾಕುವ ಅವಶ್ಯಕತೆ ಇಲ್ಲ. ಮಠವೇ ಅರ್ಹ ಮಕ್ಕಳನ್ನು ಗುರುತಿಸಿ ಶಾಲೆಗೆ ಸೇರಿಸಿಕೊಳ್ಳಲಿದೆ ಎಂದು ಯೋಜನೆ ಬಗ್ಗೆ ವಿವರಣೆ ನೀಡಿದ ಅವರು, ಸಮಾಜದ ದುರ್ಬಲ ವರ್ಗದವರಿಗೆ ಶಿಕ್ಷಣ ಒದಗಿಸಬೇಕೆನ್ನುವ ಉದ್ದೇಶದಿಂದ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು ಆದಿಚುಂಚನಗಿರಿ ಮಠದಿಂದ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದರು ಎಂದರು.
ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ಸಮಾಜಕ್ಕೆ ಸಂತರ ಅನಿವಾರ್ಯವಿದೆ. ಸಮಾಜ ಸುಧಾರಣೆ, ಸಚ್ಚಾರಿತ್ರೃ ನಿರ್ಮಾಣಕ್ಕೆ ಸಂತರ ಅವಶ್ಯಕತೆ ಇದೆ. ಬಿಜಿಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಥಾರಯುತ ಶಿಕ್ಷಣ ಲಭಿಸುತ್ತಿದೆ. ಲೌಕಿಕ ಶಿಕ್ಷಣದ ಜತೆ ಆಧ್ಯಾತ್ಮಿಕ ಶಿಕ್ಷಣ ಬೇಕು ಎಂದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಮಂಗಳೂರು ಕಾವೂರಿನಲ್ಲಿ 54 ಮಕ್ಕಳಿಂದ ಆರಂಭಗೊಂಡ ಜಿಜಿಎಸ್ ಶಿಕ್ಷಣ ಸಂಸ್ಥೆ ಇಂದು ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ದಿವ್ಯಾನುಗ್ರಹದಿಂದ ಬೆಳೆದು ನಿಂತು ರಜತಮಹೋತ್ಸವ ಆಚರಿಸುತ್ತಿದೆ ಎಂದರು.
ರಜತ ಮಹೋತ್ಸವ ಸಮಿತಿ ಅಧ್ಯಕ್ಷ, ಶಾಸಕ ಡಾ.ವೈ.ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಜತ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಪಿ.ಎಸ್.ಪ್ರಕಾಶ್ ಪ್ರಸ್ತಾವನೆಗೈದರು. ಶ್ರೀ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸ್ಥಳೀಯ ಕಾರ್ಪೋರೇಟರ್ ಸುಮಂಗಳಾ ಮುಖ್ಯ ಅತಿಥಿಯಾಗಿದ್ದರು. ಮಾಜಿ ಶಾಸಕ ಸಂಜೀವ ಮಠಂದೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಣದೀಪ್ ಕಾಂಚನ್ ವಂದಿಸಿದರು. ಬಿಜಿಎಸ್ ಕಾಲೇಜು ಪ್ರಾಂಶುಪಾಲ ಸುಬ್ರಹ್ಮಣ್ಯ ಸಿ. ಕಾರ್ಯಕ್ರಮ ನಿರೂಪಿಸಿದರು. ಕೀರ್ತಿರಾಜ್ ಕರಂದಾಡಿ ಸನ್ಮಾನಿತರನ್ನು ಪರಿಚಯಿಸಿದರು.
------
ಕರಾವಳಿ ರತ್ನ ಪ್ರಶಸ್ತಿ ಪ್ರದಾನ
ಸಾಧಕರಾದ ಡಾ.ಕೆ.ಚಿನ್ನಪ್ಪ ಗೌಡ(ಸಾಹಿತ್ಯ), ಪ್ರೊ.ಕೆ.ವಿ.ರಾವ್(ವಿಜ್ಞಾನ), ಗುರುವಪ್ಪ ಎನ್.ಟಿ.ಬಾಳೆಪುಣಿ(ಮಾಧ್ಯಮ), ಡಾ.ರಮೇಶ್ ಡಿ.ಪಿ., ಡಾ.ಸತೀಶ್ ಕಲ್ಲಿಮಾರ್(ವೈದ್ಯಕೀಯ), ಪ್ರಕಾಶ್ ಅಂಚನ್ ಬಂಟ್ವಾಳ(ಶಿಕ್ಷಣ), ಮಾಧವ ಸುವರ್ಣ(ಧಾರ್ಮಿಕ), ಭಕ್ತಿ ಭೂಷಣ್‌ದಾಸ್(ಗೋ ಸೇವೆ), ಪುಷ್ಪಾವತಿ ಬುಡ್ಲೆಗುತ್ತು(ನಾಟಿ ವೈದ್ಯೆ), ವೀಣಾ ಕುಲಾಲ್(ಸಮಾಜಸೇವೆ), ನರಸಿಂಹ ರಾವ್ ದೇವಸ್ಯ, ಡಾ.ಕೆ.ಎಸ್.ಗೋಪಾಲಕೃಷ್ಣ ಕಾಂಚೋಡು, ಸುರೇಶ್ ಬಲ್ನಾಡು(ಕೃಷಿ), ಜಗದೀಶ್ ಆಚಾರ್ಯ(ಸಂಗೀತ), ಮಂಜುಳಾ ಸುಬ್ರಹ್ಮಣ್ಯ(ನೃತ್ಯ), ಶಿವರಾಮ ಪಣಂಬೂರು(ಯಕ್ಷಗಾನ), ಸುಜಾತಾ ಮಾರ್ಲ(ಯೋಗ), ಸಚಿನ್ ಸುಂದರ ಗೌಡ, ರಾಧಾಕೃಷ್ಣ, ಕೇಶವ ಅಮೈ, ಕುಸುಮಾಧರ(ಉದ್ಯಮ), ಅಭಿಷೇಕ್ ಶೆಟ್ಟಿ(ಕ್ರೀಡೆ), ಮಾಧವ ಉಳ್ಳಾಲ್(ಪರಿಸರ), ವಿಕ್ರಂ ಬಿ.ಶೆಟ್ಟಿ(ಚಿತ್ರಕಲೆ) ಅವರಿಗೆ ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
------
ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ವೃದ್ಧಿಸುವ ಉದ್ದೇಶದಿಂದ ಶಾಸಕರು, ಸರ್ಕಾರಿ ಅಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು. ಇದರಿಂದ ಸರ್ಕಾರಿ ಶಾಲೆಗಳ ಕಡೆಗೆ ಹೆಚ್ಚಿನ ಲಕ್ಷೃ ಸುಲಭವಾಗುತ್ತದೆ. ಸರ್ಕಾರಿ ಶಾಲೆಗಳಿಗೆ ಅಗತ್ಯ ಪ್ರಮಾಣದಲ್ಲಿ ಮೂಲಸೌಕರ್ಯ ದೊರೆಯುವುದು ಸಾಧ್ಯವಾಗುತ್ತದೆ.
* ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ