

ಮಂಗಳೂರು : ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಮಾನಸಿಕ ಪರಿವರ್ತನೆ ಅಗತ್ಯ. ದೈಹಿಕ ಹಾಗೂ ಮಾನಸಿಕವಾಗಿ ಅವರನ್ನು ಸುಸ್ಥಿರವಾಗಿರಿಸಲು ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳು ಮುಖ್ಯವಾಗಿರುತ್ತವೆ. ಬೇಸಿಗೆ ಶಿಬಿರಗಳಿಂದ ಅಂತಹ ಮೌಲ್ಯಯುತ ಸಂಸ್ಕಾರವನ್ನು ನೀಡಲು ಸಾಧ್ಯ ಎಂದು ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ನಗರದ ಕಾವೂರಿನಲ್ಲಿ ಸೋಮವಾರ ನಡೆದ ಬಿಜಿಎಸ್ ಸಂಭ್ರಮ 2024 ಉದ್ಘಾಟಿಸಿ ಮಾತನಾಡಿದ ಅವರು ‘ ಪ್ರತಿ ಮಗುವಿನಲ್ಲಿ ಒಂದೊಂದು ಸುಪ್ತವಾದ ಪ್ರತಿಭೆ ಅಡಗಿರುತ್ತದೆ. ಅದನ್ನು ಹುಡುಕಿ ಅವರಲ್ಲಿ ಆಸಕ್ತಿ ಬರುವಂತೆ ತಂದೆ ತಾಯಿ ಶಿಕ್ಷಕರು ಮಾಡಬೇಕು. ಎಳವೆಯಲ್ಲಿ ಹೊಸತನವನ್ನು ತುಂಬುವ ಪ್ರಯತ್ನ ಮಾಡಬೇಕು ಎಂದರು.
ನಟ ನಿರ್ದೇಶಕ ಜಗನ್ ಪವರ್ ಮುಖ್ಯ ಅತಿಥಿಯಾಗಿದ್ದರು. ಬಿಜಿಎಸ್ ಸಂಸ್ಥೆಯ ವ್ಯವಸ್ಥಾಪಕ ಸುಬ್ಬ ಕಾರಡ್ಕ , ಬಿಜಿಎಸ್ ಎಜ್ಯುಕೇಶನ್ ಸೆಂಟರ್‌ನ ಪ್ರಾಂಶುಪಾಲೆ ರೇಷ್ಮಾ ಸಿ ನಾಯರ್, ಬಿಜಿಎಸ್ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಸುಬ್ರಹ್ಮಣ್ಯ ಸಿ, ಬಿಜಿಎಸ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಪ್ರಿಯಾ ಬಂಗೇರ ಹಾಗೂ ಸಂಪನ್ಮೂಲ ವ್ಯಕ್ತಿ ನರಸಿಂಹ ಕುಲಕರ್ಣಿ ಉಪಸ್ಥಿತರಿದ್ದರು.
ಶಿಕ್ಷಕಿ ಮಮತಾ ಸ್ವಾಗತಿಸಿ, ನಿವೇದಿತಾ ವಂದಿಸಿದರು. ಕವಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.