

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಸರತ್ತು ನಡೆಸುತ್ತಿರುವ ಜಿಲ್ಲಾ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತರಕಾರಿ ಬೆಳೆಯುವ ರೈತರ ನೆರವಿಗಾಗಿ ಉತ್ತಮ ತಳಿಯ ಸಸಿ ವಿತರಿಸಲು ಸನ್ನದ್ಧವಾಗಿದೆ.
ಜಿಲ್ಲೆಯಲ್ಲಿ ರೈತರು ನಿರೀಕ್ಷಿಸುವ ತರಕಾರಿ ಸಸಿಗಳನ್ನು ನಾಟಿ ಮಾಡಲು ಎಲ್ಲ ನರ್ಸರಿಗಳಲ್ಲಿ ಪೂರಕ ಸೌಲಭ್ಯವಿದೆ. ಎಷ್ಟು ಸಸಿಗಳು ಬೇಕು ಎಂಬುದರ ಆಧಾರದ ಮೇಲೆ ಬೇಡಿಕೆ ಪಟ್ಟಿ ಪಡೆದು ಸಸಿ ನಾಟಿ ಮಾಡಿ ನಿಗದಿತ ಕಾಲಾವಧಿಯಲ್ಲಿ ರೈತರಿಗೆ ತಲುಪಿಸುವ ಕೆಲಸ ಮಾಡಲಿದೆ. ಟೊಮ್ಯಾಟೊ, ಬೀನ್ಸ್, ಮೆಣಸಿನಕಾಯಿ, ಮೂಲಂಗಿ, ಕ್ಯಾರೆಟ್ ಸೇರಿ ವಿವಿಧ ಬಗೆಯ ತರಕಾರಿ ಸಸಿಗಳ ನಾಟಿ ಮಾಡಿ ಉತ್ತಮ ತಳಿಯ ಹೆಚ್ಚು ಲನೀಡುವ ಸಸಿಗಳ ವಿತರಣೆ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೊಮ್ಯಾಟೊಗೆ ಡಿಮಾಂಡ್: ಕೆಲ ತಿಂಗಳಿಂದ ಎಲ್ಲೆಡೆ ಟೊಮ್ಯಾಟೊಗೆ ಚಿನ್ನದ ಬೆಲೆ ಬಂದಿದ್ದು, ಜಿಲ್ಲೆಯಲ್ಲಿಯೂ ರೈತರು ಹೆಚ್ಚಿನ ಪ್ರಮಾಣದಲ್ಲಿ ಟೊಮ್ಯಾಟೊ ಬೆಳೆಯಲು ಉತ್ಸುಕತೆ ತೋರುತ್ತಿದ್ದಾರೆ. ಉತ್ತಮ ತಳಿಯ ಟೊಮ್ಯಾಟೊ ನಾಟಿ ಮಾಡಿ ವಿತರಿಸಲು ಇಲಾಖೆ ಸಿದ್ಧವಾಗಿದೆ. ಆದರೆ ಇದಕ್ಕೆ ಮುನ್ನ ರೈತರು ಎಷ್ಟು ಸಸಿಗಳು ಬೇಕು ಎಂಬುದರ ಮಾಹಿತಿ ನೀಡಬೇಕು. ಇಲಾಖೆಯ ಮಾರ್ಗಸೂಚಿಯನ್ವಯ ರಿಯಾಯಿತಿ ದರದಲ್ಲಿ ಸಸಿ ವಿತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಸ್ತಾನು ಮಾಡಲ್ಲ: ಸಾಮಾನ್ಯವಾಗಿ ತರಕಾರಿ ಸಸಿಗಳನ್ನು ನರ್ಸರಿಗಳಲ್ಲಿ ದಾಸ್ತಾನು ಮಾಡಲು ಸಾಧ್ಯವಿಲ್ಲ. ನಿಗದಿತ ಅವಧಿಯೊಳಗೆ ರೈತರು ಸಸಿ ಖರೀದಿಸದಿದ್ದರೆ ಇಲಾಖೆಗೆ ನಷ್ಟವಾಗುತ್ತದೆ, ಉದಾಹರಣೆಗೆ ಟೊಮ್ಯಾಟೊ ಸಸಿಗಳನ್ನು 25 ರಿಂದ 30 ದಿನಗಳವರೆಗೆ ನರ್ಸರಿಯಲ್ಲಿ ಇಡಬಹುದು, ಬಳಿಕ ಅವುಗಳನ್ನು ನಾಟಿ ಮಾಡಲೇಬೇಕು. ಇಲ್ಲವಾದರೆ ಅಷ್ಟೂ ಸಸಿಗಳ ಉತ್ಪಾದನಾ ವೆಚ್ಚದಿಂದ ಇಲಾಖೆಗೆ ನಷ್ಟವಾಗಲಿದೆ, ಆದ್ದರಿಂದ ಬೆಳೆಗಾರರು ಬೇಡಿಕೆ ಸಲ್ಲಿಸಿದ ಆಧಾರದ ಮೇಲೆ ನರ್ಸರಿಗಳಲ್ಲಿ ಸಸಿಗಳ ಲಭ್ಯತೆ ಇರಲಿದೆ ಎಂಬುದು ಅಧಿಕಾರಿಗಳ ಸ್ಪಷ್ಟನೆಯಾಗಿದೆ.
ಮುಂಗಡ ಪಾವತಿಸಬೇಕು: ಯಾರೇ ತರಕಾರಿ ಬೆಳೆಗಾರರು ಯಾವುದೇ ತರಕಾರಿ ಸಸಿಗಳನ್ನು ಖರೀದಿಸಬೇಕೆಂದರೆ ಮುಂಗಡ ಹಣ ಪಾವತಿಸಬೇಕು. ಖರೀದಿಸುವ ಸಸಿಗಳ ಆಧಾರದ ಮೇಲೆ ಶೇ.40 ಹಣವನ್ನು ಮುಂಗಡ ಪಾವತಿಸಿದರಷ್ಟೇ ಸಸಿಗಳ ಬ್ರೀಡಿಂಗ್ ಸಾಧ್ಯವಾಗಲಿದೆ. ಇಲಾಖೆಯ ಮಾರ್ಗಸೂಚಿಯಂತೆ ನಿಗದಿಮಾಡಿರುವ ದರದಲ್ಲಿ ಸಸಿಗಳನ್ನು ರೈತರಿಗೆ ವಿತರಿಸಲಾಗುತ್ತದೆ.
ಸ್ಥಳೀಯವಾಗಿಯೇ ಲಭ್ಯ: ಜಿಲ್ಲೆಯಲ್ಲಿನ ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ಹಾಗೂ ದೇವನಹಳ್ಳಿ ತಾಲೂಕುಗಳಲ್ಲಿ ಇಲಾಖೆಗೆ ನರ್ಸರಿಗಳಿದ್ದು, ಆಯಾ ತಾಲೂಕಿನ ತರಕಾರಿ ಬೆಳೆಗಾರರು ಸ್ಥಳೀಯವಾಗಿ ನರ್ಸರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು, ಅಲ್ಲಿಯೇ ಮುಂಗಡ ಹಣ ಪಾವತಿಸಿ ಸಸಿಗಳಿಗೆ ಆರ್ಡರ್ ನೀಡಬಹುದು ಎಂದು ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂಪರ್ಕ ಸಂಖ್ಯೆ: ಜಿಲ್ಲೆಗೆ ಸಂಬಂಧಿಸಿದಂತೆ ತರಕಾರಿ ಸಸಿಗಳಿಗೆ ಆರ್ಡರ್ ಮಾಡಲಿಚ್ಛಿಸುವ ಬೆಳೆಗಾರರು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರನ್ನು 94490 45052 ಸಂಪರ್ಕಿಸಬಹುದು. ದೇವನಹಳ್ಳಿ ಪೂಜೇನಹಳ್ಳಿ 97404 32018, ಹೊಸಕೋಟೆ ಕನ್ನಮಂಗಲ 73380 11518, ದೊಡ್ಡಬಳ್ಳಾಪುರ 91640 21289, ನೆಲಮಂಗಲ ತಾಲೂಕು ತಿಪ್ಪಗೊಂಡನಹಳ್ಳಿ 90357 20179 ಸಂಪರ್ಕಿಸಬಹುದು.
ಜಿಲ್ಲೆಗೆ ಸಂಬಂಧಪಟ್ಟಂತೆ ರೈತರು ಇಚ್ಛಿಸುವ ತರಕಾರಿ ಸಸಿಗಳನ್ನು ಬ್ರೀಡ್ ಮಾಡಿ ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸಲು ತೋಟಗಾರಿಕೆ ಇಲಾಖೆ ಸಿದ್ಧವಿದೆ. ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ನರ್ಸರಿಗಳಿದ್ದು, ಅಲ್ಲಿಯೇ ರೈತರು ಸಸಿಗಳನ್ನು ಪಡೆಯಬಹುದು. ಯಾವ ಬಗೆಯ ತರಕಾರಿ ಸಸಿ ಬೇಕು ಎಷ್ಟು ಬೇಕು ಎಂಬುದರ ಬೇಡಿಕೆ ಪಟ್ಟಿ ನೀಡಿ ಮುಂಗಡ ಪಾವತಿಸಿದರೆ ತಕ್ಷಣ ಸಿಬ್ಬಂದಿ ಕಾರ್ಯಪ್ರವೃತ್ತರಾಗಲಿದ್ದಾರೆ.
ಗುಣವಂತ, ಉಪನಿರ್ದೇಶಕ ಜಿಲ್ಲಾ ತೋಟಗಾರಿಕೆ ಇಲಾಖೆ