ಬಿಜಿಎಂಎಲ್ ಪ್ರಾರಂಭ ಅನುಮಾನ

KGF BGML MP Mallesh baabu
Published on

ಕೆಜಿಎಫ್: ಬಿಜಿಎಂಎಲ್ ಭಾಗದಲ್ಲಿ ಚಿನ್ನದ ನಿಕ್ಷೇಪವಿದೆಯೇ ಎಂಬುದನ್ನು ಸರ್ವೇ ನಡೆಸಲು ಖಾಸಗಿ ಏಜೆನ್ಸಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ, ಇಲ್ಲಿ ಯಾವುದೇ ಚಿನ್ನದ ನಿಕ್ಷೇಪವಿಲ್ಲ ಎಂದು ವರದಿ ನೀಡಿರುವುದರಿಂದ ಮರಳಿ ಬಿಜಿಎಂಎಲ್ ಪ್ರಾರಂಭವಾಗುವುದು ಅನುಮಾನ ಎಂದು ಸಂಸದ ಎಂ.ಮಲ್ಲೇಶ್ ಬಾಬು ಹೇಳಿದರು.

ಇತ್ತೀಚೆಗೆ ಬಿಜಿಎಂಎಲ್ ಸ್ವರ್ಣಭವನ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಜಿಎಫ್ ಚಿನ್ನದ ಗಣಿಗಳನ್ನು ಕೇಂದ್ರ, ರಾಜ್ಯ ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದರೂ ರಾಜ್ಯ ಸರ್ಕಾರ ಬಿಜಿಎಂಎಲ್ ಕಾರ್ಖಾನೆ ಪ್ರಾರಂಭಿಸಲು ಮುಂದೆ ಬಂದಿಲ್ಲ ಎಂದ ಅವರು, ಬಿಜಿಎಂಎಲ್ ಜಾಗದಲ್ಲಿ ಹಾಕಲಾಗಿರುವ ಸೈನೈಡ್ ದಿಬ್ಬಗಳ ಹರಾಜು ಪ್ರಕ್ರಿಯೆಯನ್ನು ಕೇಂದ್ರ ಶೀಘ್ರ ಮುಂದುವರಿಸಲಿದೆ ಎಂದರು.

ಇನ್ನು 2 ತಿಂಗಳಲ್ಲಿ ಕೇಂದ್ರದ ಗಣಿ ಸಚಿವ ಕಿಶನ್‌ರೆಡ್ಡಿ ಹಾಗೂ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಇಬ್ಬರೂ ಕೆಜಿಎಫ್‌ಗೆ ಆಗಮಿಸಿ ಎಸ್‌ಟಿಬಿಪಿ ಯೋಜನೆಯಡಿ ನಿವೃತ್ತಿಗೊಂಡ ಕಾರ್ಮಿಕರಿಗೆ ವಾಸಸ್ಥಳದ ದೃಢೀಕರಣ ಪ್ರಮಾಣ ಪತ್ರ ವಿತರಿಸಲಿದ್ದಾರೆ ಎಂದರು.

ಅಂತಾರಾಷ್ಟ್ರೀಯಮಟ್ಟದಲ್ಲಿ ನಿರ್ಮಾಣವಾಗಿದ್ದ ಜಿಮ್ಕಾನ ಮೈದಾನ ನಿರ್ವಹಣೆ ಕೊರತೆಯಿಂದ ಹಾಳಾಗಿದ್ದು, ಮೈದಾನವನ್ನು ಕ್ರೀಡಾ ಚಟುವಟಿಕೆಗಳಿಗೆ ಬಳಸಲು ಅನುವು ಮಾಡಿಕೊಡುವಂತೆ ಕ್ರೀಡಾಪಟುಗಳ ಮನವಿ ಮೇರೆಗೆ ಬಿಜಿಎಂಎಲ್ ಸಿಎಸ್‌ಒರೊಂದಿಗೆ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೈದಾನ ಸ್ವಚ್ಛಗೊಳಿಸಿ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡುವಂತೆ ಸಂಸದರು ಸೂಚಿಸಿದರು.

ಜೆಡಿಎಸ್ ಮುಖಂಡ ಕೆ.ರಾಜೇಂದ್ರನ್, ನಗರಸಭೆ ಸದಸ್ಯ ಪಾಂಡಿಯನ್ ಇದ್ದರು.

ಮದನಪಲ್ಲಿ ಡ್ಯಾಂನಿಂದ ನೀರು: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಯ ಬಳಿ ನಿರ್ಮಿಸಿರುವ ಡ್ಯಾಂನಿಂದ ಕೋಲಾರ ಜಿಲ್ಲೆಗಳ ಕೆರೆಗಳಿಗೆ ಹರಿಸುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮದನಪಲ್ಲಿಗೆ ಭೇಟಿ ನೀಡಲಾಗಿದೆ. ಡ್ಯಾಂನಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣ ಎಷ್ಟು ಮತ್ತು ನೀರು ಜಿಲ್ಲೆಗೆ ಹರಿಸುವ ಬಗೆಗಿನ ಸಾಧ್ಯತೆಗಳ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದ್ದು, ಡಿಸೆಂಬರ್‌ನಲ್ಲಿ ಆಂಧ್ರಪ್ರದೇಶ ಸಿಎಂ ಪವನ್‌ಕಲ್ಯಾಣ್ ಚಿಂತಾಮಣಿಗೆ ಬರುತ್ತಿದ್ದು, ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲಾಗುವುದು. ಅಲ್ಲದೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಮಂತ್ರಿ ದೇವೇಗೌಡರು ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬುನಾಯ್ಡು ಅವರೊಂದಿಗೆ ಮಾತನಾಡಿದರೆ ಜಿಲ್ಲೆಗೆ ನೀರು ಲಭಿಸುವ ವಿಶ್ವಾಸವಿದೆ ಎಂದು ಸಂಸದರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net