

ಮೊಳಕಾಲ್ಮೂರು: ತಾಲೂಕಿನ ಬಿ.ಜಿ.ಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ತಡರಾತ್ರಿ ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಕೂಡ್ಲಿಗಿ ತಾಲೂಕು ಅರ್ಜುನ ಚಿನ್ನೇನಹಳ್ಳಿ ಗ್ರಾಮದ ನಿವಾಸಿ, ಲಾರಿ ಚಾಲಕ ಡಿ. ಕರಿಬಸಪ್ಪ (25), ಅದೇ ಲಾರಿಯಲ್ಲಿದ್ದ ದಾವಣಗೆರೆ ಎಪಿಎಂಸಿ ಅನನ್ಯ ಪಾರ್ಸಲ್ ಸರ್ವೀಸ್ ಅಂಗಡಿಯ ಎ.ಡಿ. ಕುಮಾರಗೌಡ(45)ಮೃತ ದುರ್ದೈವಿಗಳು.
ಬಳ್ಳಾರಿ ಕಡೆಯಿಂದ ಬರುತ್ತಿದ್ದ ಲಾರಿ ಬಿ.ಜಿ.ಕೆರೆ ಸಮೀಪ ಎಚ್‌ಪಿ ಪೆಟ್ರೋಲ್ ಬಂಕ್ ಹತ್ತಿರ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಈ ಅನಾಹುತ ಸಂಭವಿಸಿದೆ.
ಸ್ಥಳಕ್ಕೆ ಮೊಳಕಾಲ್ಮೂರು ಪಿಎಸ್‌ಐ ಮಹೇಶ್ ಹೊಸಪೇಟೆ ಭೇಟಿ ನೀಡಿದ್ದರು. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.