

ಬಾಗಲಕೋಟೆ: ಕನ್ನಡ ಸಾಹಿತ್ಯ ಲೋಕದಲ್ಲಿ ವಿಮರ್ಶೆಗಳಾಚೆ ಬದುಕು ರೂಪಿಸಿಕೊಳ್ಳಲು ಸಾಹಿತ್ಯದ ಅಧ್ಯಯನ ಬಹಳ ಮುಖ್ಯವಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಪ್ರೊ.ಧರಣೇಂದ್ರ ಕುರಕುರಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ತಾಲೂಕು ಘಟಕ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಿಂಗಳ ಅತಿಥಿ ವಿಶೇಷ ಕಾರ್ಯಕ್ರಮ ಅವೃತ್ತಿ 2 ರಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಸನ್ನಿವೇಶಗಳಲ್ಲಿ ಯುವ ಲೇಖಕರು, ವಿದ್ಯಾರ್ಥಿಗಳು ವಿಮರ್ಶೆಗಳಾಚೆ ಬದುಕು ರೂಪಿಸಿಕೊಳ್ಳುವ ಸಾಹಿತ್ಯದ ಅಧ್ಯಯನ ಮಾಡಬೇಕಿದೆ. ಸಾಹಿತಿಗಳು ಆ ನಿಟ್ಟಿನಲ್ಲಿ ಮುಂಬರುವ ಪೀಳಗಿಯ ಅಂತರವನ್ನು ಗಮನದಲ್ಲಿಟ್ಟುಕೊಂಡು ವಾಸ್ತವ ನೆಲಗಟ್ಟಿನಲ್ಲಿ ಸಾಹಿತ್ಯವು ಜಗತ್ತನ್ನು ಗೆಲ್ಲಬೇಕಿದೆ ಎಂದರು.
ಸಾಹಿತ್ಯಾಸಕ್ತರು ಕಡಿಮೆಯಾಗುತ್ತಿರುವ ಈ ದಿನಮಾಮಾನದಲ್ಲಿ ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಹಾವಿದ್ಯಾಲಯಗಳಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ, ಕವನ ಸ್ಪರ್ಧೆ, ಕೌಶಲ ಪ್ರದರ್ಶನಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿಯನ್ನು ಬೆಳೆಸುತ್ತಿರುವುದು ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು.
ಪ್ರೊ.ಧರಣೇಂದ್ರ ಕುರಕುರಿ ಅವರ ಸಾಹಿತ್ಯ ಅವಲೋಕನ ಕುರಿತು ಸಾಹಿತಿ ಪ್ರೊ.ಸಿದ್ದಲಿಂಗಪ್ಪ ಬೀಳಗಿ ಮಾತನಾಡಿ, ಜನಭಾಷೆ ಮಾಧ್ಯಮದ ಮೂಲಕ ಜನರಿಗೆ ಬಹಳ ಹತ್ತಿರವಾದವರಲ್ಲಿ ಪ್ರೊ.ಧರಣೇಂದ್ರ ಕುರಕುರಿ ಅವರು ಒಬ್ಬರು. ಯುವ ಪೀಳಿಗೆಯ ಅಂತರವನ್ನು ಗಮನದಲ್ಲಿಟ್ಟುಕೊಂಡು ವರ್ತಮಾನಕ್ಕೆ ದಕ್ಕುವ ಹಾಗೆ ಇಂದಿಗೂ ಅವರ ಸಾಹಿತ್ಯ ಪ್ರಸ್ತುತವಾಗಿರುವುದು ಹೆಮ್ಮೆಯ ವಿಷಯವಾಗಿದೆ. ಧರಣೇಂದ್ರ ಕುರಕುರಿ ಅವರ ಸಾಹಿತ್ಯ ಸಾಧನೆ ಇಂದಿನ ಯುವ ಲೇಖಕರಿಗೆ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.
ಪ್ರಾಚಾರ್ಯ ಪ್ರೊ.ಎಸ್.ಎನ್.ಪಟ್ಟಣಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಸಾಹಿತ್ಯವನ್ನು ಓದುವ ಅಭಿರುಚಿಯನ್ನು ಜೀವನದಲ್ಲಿ ಬೆಳಿಸಿಕೊಳ್ಳಬೇಕು ಎಂದು ತಿಳಿಸಿದರು. ನಾಗೇಶ ನಾಯಕ ಅವರ ಕಾಡುವ ಕವಿತೆ ಕೃತಿ ಬಿಡುಗಡೆಗೊಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ನಾಗೇಶ ಜೆ.ನಾಯಕ, ಕಥೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ, ಸಂಚಾಲಕ ಪ್ರಕಾಶ ಡಂಗಿ, ಡಾ.ಪ್ರಕಾಶ ಖಾಡೆ, ತಾಲೂಕು ಕಸಾಪ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ, ಸಂವಾದಕರಾದ ಡಾ.ಉಮಾ ಅಕ್ಕಿ, ವಿಜಯಲಕ್ಷ್ಮೀ ಭದ್ರಶೆಟ್ಟಿ, ಎಚ್.ಎಸ್.ಕಾಳಿ, ಮುತ್ತು ಬಳ್ಳಾ ಮತ್ತು ಪ್ರೊ.ಸಂಗಮೇಶ ಬ್ಯಾಳಿ, ಸುನೀಲ ನಡಕಟ್ಟಿ ಉಪಸ್ಥಿತರಿದ್ದರು. ಎಂ.ವೈ.ಬಡಿಗೇರ ನಿರೂಪಿಸಿದರು.
ವಚನಕಾರರ ವಚನ ಪ್ರದರ್ಶನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಿಂದ ವಚನಕಾರ ವಚನಗಳ ಮೂಲಕ ಕೌಶಲ ಪ್ರದರ್ಶನ ಜನರ ಗಮನ ಸೆಳೆಯಿತು. ಅಲ್ಲಮ ಪ್ರಭುಗಳ, ಅಕ್ಕಮಹಾದೇವಿ, ಬಸವಣ್ಣನವರ, ತಿಂಥಿಣಿ ಮೌನೇಶ್ವರರ, ಜೇಡರ ದಾಸಿಮಯ್ಯನವರ ಸೇರಿ ಮುಂತಾದ ವಚನಕಾರರ ವಚನಗಳನ್ನು ಚಿತ್ರಗಳಲ್ಲಿ ವಿಭಿನ್ನವಾಗಿ ಪ್ರದರ್ಶನ ಮಾಡಿದರು.