

ಮಳವಳ್ಳಿ: ಮಾನವ ಕಳ್ಳ ಸಾಗಣೆ ಬಗ್ಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಎಚ್ಚರದಿಂದ ಇರಬೇಕೆಂದು ಅಪರ ಸಿವಿಲ್ ನ್ಯಾಯಾಧೀಶೆ ಕಾವ್ಯಶ್ರೀ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ವಿದ್ಯಾವಿಕಾಸ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಮಾನವ ಕಳ್ಳ ಸಾಗಣೆ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅತಿಯಾದ ದುಡ್ಡಿನ ಆಸೆಗಾಗಿ ಮಕ್ಕಳು ಮತ್ತು ಮಹಿಳೆಯರನ್ನು ಭಿಕ್ಷಾಟನೆ, ವೇಶ್ಯಾವಾಟಿಕೆಗೆ ಬಲವಂತವಾಗಿ ದೂಡಿ ದುಷ್ಟ ಕೂಟದ ಜನರು ದುಡ್ಡು ಗಳಿಸುವ ದಂಧೆ ನಡೆಸುತ್ತಿದ್ದಾರೆ. ಇದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೇಳಿದರು.
ಹೀಗಿದ್ದರೂ ವರ್ಷದಿಂದ ವರ್ಷಕ್ಕೆ ಮಾನವ ಕಳ್ಳ ಸಾಗಣೆ ಪ್ರಕರಣಗಳು ನಡೆಯುತ್ತಿದ್ದು, ಕಾನೂನು ಸೇವೆಗಳ ಸಮಿತಿ ವತಿಯಿಂದ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಅಪರ ಸರ್ಕಾರಿ ವಕೀಲ ಎಂ.ಎಸ್.ಶ್ರೀಕಂಠಸ್ವಾಮಿ ಮಾತನಾಡಿ, ಸಮಾಜದ ಪಿಡುಗಾಗಿರುವ ಬಡತನ, ನಿರುದ್ಯೋಗವನ್ನು ಬಂಡವಾಳ ಮಾಡಿಕೊಂಡಿರುವ ದುರುಳರು ಜನರಿಗೆ ಹಣದ ಆಮಿಷವೊಡ್ಡಿ, ಇಲ್ಲವೇ ಉದ್ಯೋಗ ಕೊಡಿಸುವುದಾಗಿ ಪುಸಲಾಯಿಸಿ ಮಕ್ಕಳನ್ನು, ಹೆಂಗಸರನ್ನು ಕಳ್ಳ ಸಾಗಣೆ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟಬೇಕಾದರೆ ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆದಾಗ ಮಾತ್ರ ಸಾಧ್ಯ ಎಂದರು.
ಮಕ್ಕಳು ಯಾವುದೇ ಅನಾಮಧೇಯ ವ್ಯಕ್ತಿ ನೀಡುವ ಆಸೆ, ಆಮಿಷಗಳ ಜಾಲಕ್ಕೆ ಸಿಲುಕಬಾರದು ಎಂದು ಸಲಹೆ ನೀಡಿದರು. ಸಂಪನ್ಮೂಲ ವ್ಯಕ್ತಿ ವಕೀಲ, ಮೋಹನ ಕುಮಾರ್ ಮಾತನಾಡಿದರು. ವಿದ್ಯಾವಿಕಾಸ್ ಟ್ರಸ್ಟ್ ಅಧ್ಯಕ್ಷ ಎಂ.ರಮೇಶ್, ಕಾರ್ಯದರ್ಶಿ ದೊಡ್ಡಣ್ಣ, ಮುಖ್ಯ ಶಿಕ್ಷಕಿ ನಿವೇದಿತಾ ಇದ್ದರು.