

ಭಟ್ಕಳ: ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳನ್ನು ಸರಿಯಾಗಿ ಬಳಸಿಕೊಳ್ಳಿ. ಇದರಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ಹಾನಿಯೂ ಇದ್ದು ಸದಾ ಎಚ್ಚರಿಕೆಯಿಂದ ಇರಬೇಕು ಎಂದು ಎಸ್‌ಪಿ ಎಂ ನಾರಾಯಣ ಹೇಳಿದರು.
ಪಟ್ಟಣದ ಶ್ರೀಗುರು ಸುಧೀಂದ್ರ ಕಾಲೇಜಿನಲ್ಲಿ ಉಪವಿಭಾಗದ ಪೊಲೀಸ್ ಠಾಣೆ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಸೈಬರ್ ಕ್ರೈಂ ಕುರಿತು ವಿದ್ಯಾರ್ಥಿಗಳಿಗೆ ಅವರು ಮಾಹಿತಿ ನೀಡಿದರು. ಜನರ ಆಸಕ್ತಿಯನ್ನೇ ಬಂಡವಾಳ ಮಾಡಿಕೊಂಡು ಹಣದೋಚುವ ಸೈಬರ್ ಕಳ್ಳರ ಬಗ್ಗೆ ಸದಾ ಜಾಗರೂಕರಾಗಿರಬೇಕು. ಸುಳ್ಳು ಸಂದೇಶಗಳನ್ನು ಕಳುಹಿಸಿದವರಿಗೂ ಶಿಕ್ಷೆ ಖಚಿತ. ಮತಗಳ ನಡುವೆ ಕಲಹ, ಧರ್ಮಗಳ ನಡುವೆ ಜಗಳ, ಧರ್ಮಾಂಧತೆ ಸೃಷ್ಟಿಸಿ ಮಕ್ಕಳ ಮನಸ್ಸು ಪರಿವರ್ತನೆ ಮಾಡಿ ದೇಶದ್ರೋಹ, ಭಯೋತ್ಪಾದನೆಯಂತಹ ಕೃತ್ಯಗಳಿಗೆ ಪ್ರೇರಣೆ ನೀಡುತ್ತಿರುವುದು ಸೈಬರ್ ಜಗತ್ತಿನಲ್ಲಿ ನಡೆಯುತ್ತಿದ್ದು ಇವುಗಳಿಂದ ಜಾಗೃತರಾಗಿರಬೇಕು.
ಇತ್ತೀಚಿನ ದಿನಗಳಲ್ಲಿ ಹತ್ಯೆ, ದೌರ್ಜನ್ಯ ಸೇರಿದಂತೆ ಹಿಂಸೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅಮಲು ಪದಾರ್ಥ ಸೇವನೆ, ಸಿನಿಮಾ, ಒಟಿಟಿಯಲ್ಲಿ ತೋರಿಸುವ ಜಗತ್ತು ನಿಜವಾದುದಲ್ಲ. ನಾವು ಬದುಕುತ್ತಿರುವ ಪ್ರಪಂಚವೇ ಸತ್ಯ. ದೌರ್ಜನ್ಯ ನಡೆಸಿದರೆ ಶಿಕ್ಷೆ ಅನುಭವಿಸುವದು ಖಚಿತ. ವಿದ್ಯಾರ್ಥಿಗಳು ಜಾಗರೂಕರಾಗಿದ್ದು, ಕಲಿತ ಶಾಲೆ, ಹುಟ್ಟಿದ ಊರು, ಪಾಲಕರಿಗೆ ಗೌರವ ತರುವ ಕೆಲಸವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಡಿವೈಎಸ್‌ಪಿ ಮಹೇಶ ಎಂ.ಕೆ, ಪಿಐ ಗೋಪಿಕೃಷ್ಣನ್ ಕೆ.ಆರ್, ಭಟ್ಕಳ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಸುರೇಶ ನಾಯಕ, ರಾಜೇಶ ನಾಯಕ ಇದ್ದರು. ಪ್ರಾಂಶುಪಾಲ ಶ್ರೀನಾಥ ಪೈ ಸ್ವಾಗತಿಸಿದರು.