ಜಾನುವಾರು ಕಳ್ಳತನದ ಬಗ್ಗೆ ಎಚ್ಚರಿಕೆಯಿಂದಿರಲಿ

27-kkr2(5-24
ಕಿಕ್ಕೇರಿ ಹೋಬಳಿಯ ರಾಮನಹಳ್ಳಿ ಗ್ರಾಮದಲ್ಲಿ ಭಾನುವಾರ ಸಾರ್ವಜನಿಕ ಕುಂದುಕೊರತೆ ಸಭೆ ನಡೆಯಿತು. ಇನ್‌ಸ್ಪೆಕ್ಟರ್ ರೇವತಿ, ಗ್ರಾಮಸ್ಥರು ಇದ್ದರು.
Published on

ಕಿಕ್ಕೇರಿ: ಮಳೆಗಾಲದಲ್ಲಿ ಹೈನುಗಾರರು ಬಲು ಎಚ್ಚರಿಕೆಯಿಂದ ಇರಬೇಕು ಎಂದು ಇನ್‌ಸ್ಪೆಕ್ಟರ್ ರೇವತಿ ತಿಳಿಸಿದರು.


ಹೋಬಳಿಯ ರಾಮನಹಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ರೈತರು ಬಹುತೇಕ ಜಾನುವಾರು, ಮೇಕೆ, ಆಡುಗಳನ್ನು ರಾತ್ರಿ ವೇಳೆ ಹೊರಗಡೆ ಕಟ್ಟುವುದು ಸಾಮಾನ್ಯ. ಮಳೆಗಾಲದಲ್ಲಿ ಜನರು ಮನೆಯ ಒಳಗಡೆ ಇರುವುದನ್ನು ತಿಳಿದು ದುಷ್ಕರ್ಮಿಗಳು ಜಾನುವಾರು, ಸಾಕುಪ್ರಾಣಿಗಳನ್ನು ಕಳವು ಮಾಡಲು ಹೊಂಚು ಹಾಕುತ್ತಾರೆ. ಮೊದಲು ಗ್ರಾಮಗಳನ್ನು ವೀಕ್ಷಣೆ ಮಾಡಿ ನಂತರ ಕಳವಿಗೆ ಮುಂದಾಗುತ್ತಾರೆ. ಜನರು ಅಪರಿಚಿತ ವ್ಯಕ್ತಿಗಳು ಕಂಡಾಗ ಮಾಹಿತಿ ನೀಡಬೇಕು ಎಂದರು.


ಜಾನುವಾರು, ಕುರಿ, ಮೇಕೆ, ಸಾಕುಪ್ರಾಣಿಗಳನ್ನು ಆದಷ್ಟು ಸುಭದ್ರವಾದ ಕೊಟ್ಟಿಗೆ ನಿರ್ಮಿಸಿಕೊಂಡು ಒಳಗಡೆ ಕಟ್ಟಿಹಾಕಿಕೊಳ್ಳಿ. ಈ ಹಿಂದೆ ಬಾರಿ ಪ್ರಮಾಣದಲ್ಲಿ ಕುರಿಗಳನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ. ಸಣ್ಣಪುಟ್ಟ ಸಮಸ್ಯೆಗಳನ್ನು ದೊಡ್ಡದಾಗಿ ಮಾಡಿಕೊಂಡು ಗಲಾಟೆ ಮಾಡಿಕೊಳ್ಳದಿರಿ. ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಮುಂದಾಗಿ. ಅಕ್ರಮವಾಗಿ ಮದ್ಯ, ಮರಳುಗಾರಿಕೆ ನಡೆದಲ್ಲಿ ಮಾಹಿತಿ ನೀಡಿ. ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಹಿಡಲಾಗುವುದು ಎಂದು ಹೇಳಿದರು. ಸಂಚಾರ ನಿಯಮ ಪಾಲಿಸಿ. ಅಪ್ರಾಪ್ತರಿಗೆ ವಾಹನ ನೀಡದಿರಿ ಎಂದು ಇದೇ ವೇಳೆ ಸಲಹೆ ನೀಡಿದರು.


ಗ್ರಾಮದ ಮುಖಂಡರು ಮಾತನಾಡಿ, ತಮ್ಮ ಇಲಾಖೆಯಲ್ಲಿನ ಹಲವು ಸಿಬ್ಬಂದಿ ರಾತ್ರಿ ಕುಡಿದು ಕರ್ತವ್ಯ ನಿರ್ವಹಿಸುತ್ತಾರೆ. ಸಾರ್ವಜನಿಕರೊಂದಿಗೆ ಅನೂಚಿತವಾಗಿ ವರ್ತಿಸುತ್ತಾರೆ. ಹೋಬಳಿ ಕೇಂದ್ರದಿಂದ ರಾತ್ರಿ ವೇಳೆ ಬರಲು ಇಂತಹವರಿಂದ ಕಷ್ಟವಾಗುತ್ತಿದೆ ಎಂದು ಆರೋಪಿಸಿ ಹೆಸರು ತಿಳಿಸಲು ಹಿಂಜರಿದರು.
ಇಂತಹವರ ಮೇಲೆ ನಿಗಾ ಇಡಲಾಗುವುದು. ಅಂಜಿಕೆ ಬೇಡ. ಕಾನೂನು ಸುವ್ಯವಸ್ಥೆ, ರಕ್ಷಣೆ ತಮ್ಮ ಕರ್ತವ್ಯವಾಗಿದೆ ಎಂದು ಇನ್‌ಸ್ಪೆಕ್ಟರ್ ರೇವತಿ ಧೈರ್ಯ ಹೇಳಿದರು.

ಗ್ರಾಮದ ವಿವಿಧ ಮಹಿಳಾ ಸಂಘದವರು, ಗ್ರಾಮ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net