

ಕೊಪ್ಪಳ: ಯಲಬುರ್ಗಾ ತಾಲೂಕು ಬೇವೂರು ಕರ್ನಾಟಕ ಬ್ಯಾಂಕ್‌ನಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪೊಲೀಸರ ಬಲೆಗೆ ಬಿದ್ದಿದ್ದು, ಉಳಿದವರ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಎಸ್ಪಿ ಜಿ.ಸಂಗೀತಾ ತಿಳಿಸಿದ್ದಾರೆ.
ಮಹಾರಾಷ್ಟ್ರದ ಪ್ರಶಾಂತ್ ಹಾಗೂ ಹರಿದಾಸ ಬಂಧಿತರು. ಸಂತೋಷ ಎಂಬಾತ ಕೃತ್ಯದ ಮಾಸ್ಟರ್ ಮೈಂಡ್. ಇವರು ಸೇರಿದಂತೆ ಮಹಾರಾಷ್ಟ್ರದ ನಾಲ್ವರು ಹಾಗೂ ಉತ್ತರ ಪ್ರದೇಶದ ಆರು ಜನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಈಗ ಸೆರೆ ಸಿಕ್ಕವರು ಜಳಕಿ ಬಳಿ ಕದ್ದಿದ್ದ ಆಭರಣಗಳಲ್ಲಿ ಮಾರಲೆತ್ನಿಸಿದಾಗ ಬಂಧಿಸಲಾಗಿದೆ. 13.16 ಲಕ್ಷ ರೂ. ಮೌಲ್ಯದ 370 ಗ್ರಾಂ ಬಂಗಾರ, 65 ಸಾವಿರ ರೂ. ನಗದು ಮತ್ತು ಕೃತ್ಯಕ್ಕೆ ಬಳಸಿದ ಸ್ಕಾರ್ಪಿಯೋ, ಸ್ವಿಫ್ಟ್ ಕಾರು ಹಾಗೂ ಮೂರು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಇವರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಇವರು ವೃತ್ತಿಯಲ್ಲಿ ಕಳ್ಳರಾಗಿದ್ದು, ಆಂಧ್ರದ ರಾಜಮಂಡ್ರಿ ಜೈಲಿಂದ ಜಾಮೀನಿನ ಮೇಲೆ ಇತ್ತೀಚೆಗೆ ಬಿಡುಗಡೆಯಾಗಿದ್ದಾರೆ. ಗ್ರಾಮೀಣ ಪ್ರದೇಶದ ಬ್ಯಾಂಕ್‌ಗಳೇ ಇವರ ಟಾರ್ಗೇಟ್ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಸಿನಿಮೀಯ ಕಾರ್ಯಾಚರಣೆ
ಸೆ.23ರ ಸಂಜೆ ಆರು ಗಂಟೆಯಿಂದ ಸೆ.24ರ ಬೆಳಗ್ಗೆ ಏಳರವರೆಗೆ ಕಳ್ಳತನವಾಗಿದೆ. ಕಂಟ್ರಿ ಪಿಸ್ತೂಲ್ ಹೊಂದಿದ್ದ ಇವರೆಲ್ಲ ಬ್ಯಾಂಕ್ ಪ್ರವೇಶಿಸುತ್ತಲೇ ಸಿಸಿಟಿವಿ ಕ್ಯಾಮರಾ ಸಂಪರ್ಕ ಕಡಿತಗೊಳಿಸಿದ್ದಾರೆ. ಬಳಿಕ ಗ್ಯಾಸ್‌ಕಟರ್ ಬಳಸಿ ಹಣ, ಬಂಗಾರ ಇರುವ ಕೋಣೆ ಬಾಗಿಲು ಕಟ್ ಮಾಡಿದ್ದಾರೆ. ನಂತರ ಬ್ಯಾಗ್‌ನಲ್ಲಿ 3,716 ಗ್ರಾಂ ಚಿನ್ನ, 21.75 ಲಕ್ಷ ರೂ. ನಗದನ್ನು ದೋಚಿ ಕಾರಲ್ಲಿ ಪರಾರಿಯಾಗಿದ್ದಾರೆ. ಪ್ರಕರಣದಲ್ಲಿ ಯಾವೊಂದು ಸುಳಿವು ದೊರೆಯದಿರುವುದು ಸವಾಲಾಗಿತ್ತು. ಪ್ರಕರಣ ಬೇಧಿಸಲು ನಾಲ್ಕು ತಂಡ ರಚಿಸಿದ್ದು, 13 ದಿನದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ವಿವಿಧ ರಾಜ್ಯಗಳಲ್ಲಿ ಬ್ಯಾಂಕ್ ಕಳವು ಪ್ರಕರಣಗಳನ್ನು ಅಧ್ಯಯನ ಮಾಡಿ, ನಮ್ಮಲ್ಲಿ ನಡೆದ ಕೃತ್ಯದ ಮಾದರಿಯಲ್ಲಿ ಬೇರೆಡೆ ನಡೆದ ಕೃತ್ಯಗಳನ್ನು ತಾಳೆ ಮಾಡಿದಾಗ ಜಾಡು ಸಿಕ್ಕಿತು. ಅದನ್ನು ಆಧರಿಸಿ ಇವರ ಚಲನವಲದ ಮೇಲೆ ನಿಗಾವಹಿಸಲಾಗಿತ್ತು. ಮರಾಠಿ ಭಾಷೆ ಬರದ ಕಾರಣ ಸ್ಥಳೀಯರ ಸಹಾಯ ಪಡೆದು ಸಂಭಾಷಣೆ ನಡೆಸಿದ್ದೇವೆ. ಜಳಕಿ ಬಳಿ ಕದ್ದ ಚಿನ್ನ ಮಾರಲು ಬರುವ ಮಾಹಿತಿ ಪಡೆದು ಬಂಧಿಸಲಾಯಿತು. ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಸಿಪಿಐ ಎಂ.ನಾಗರೆಡ್ಡಿ, ಪಿಐ ಶಿವರಾಜ ಇಂಗಳಗಿ, ಪಿಎಸ್‌ಗಳಾದ ವೆಂಕಟೇಶ್ ಎನ್., ಅಮರೇಶ ಹುಬ್ಬಳ್ಳಿ ಸೇರಿ ಇತರ ಸಿಬ್ಬಂದಿ ಸಾಕಷ್ಟು ಶ್ರಮವಹಿಸಿದೆ. ಅವರಿಗೆಲ್ಲ ಬಹುಮಾನ ನೀಡಲಾಗುವುದೆಂದು ಎಸ್ಪಿ ತಿಳಿಸಿದರು.