

ಭಟ್ಕಳ: ಯುಗಾದಿ ಹಬ್ಬ ಮತ್ತು ಹೊಸ ವರ್ಷದ ಆಚರಣೆ ಪ್ರಯುಕ್ತ ಭಟ್ಕಳ ಹಿಂದು ಜಾಗರಣ ವೇದಿಕೆಯ ನೇತೃತ್ವದಲ್ಲಿ ಹಾಗೂ ಭಟ್ಕಳದ ಸಮಸ್ತ ಹಿಂದು ಸಮಾಜದ ಸಹಯೋಗದೊಂದಿಗೆ ಭಟ್ಕಳದಲ್ಲಿ ಪ್ರಥಮ ಬಾರಿಗೆ ದಂಪತಿಗೆ ಅರಿಶಿಣ, ಕುಂಕುಮ ಹಾಗೂ ಬೇವು, ಬೆಲ್ಲ ಹಂಚುವ ವಿಶೇಷ ಧಾರ್ವಿುಕ ಕಾರ್ಯಕ್ರಮವನ್ನು ಮಾ. 30ರಂದು ಇಲ್ಲಿನ ಮುಗುಳಿಕೋಣ ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಹಿಂದು ಜಾಗರಣ ವೇದಿಕೆ ಸಹಸಂಚಾಲಕ ನಾಗೇಶ ನಾಯ್ಕ ಹೇಳಿದರು.
ಇಲ್ಲಿನ ಬಂದರ ರಸ್ತೆಯ ನಾಗಮಾಸ್ತಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಭಾನುವಾರ ಸಂಜೆ 4 ಗಂಟೆಯಿಂದ 6 ಗಂಟೆಯ ತನಕ ಈ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರ್ಬನ್ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಸುಭಾಶ ಶೆಟ್ಟಿ ವಹಿಸಲಿದ್ದು, ಧಾರ್ವಿುಕ ಉಪನ್ಯಾಸವನ್ನು ಸಂವೇದನಾ ಫೌಂಡೇಷನ್ ಸಂಸ್ಥಾಪಕರು, ಲೇಖಕರು ಮತ್ತು ಅಂಕಣಕಾರರಾದ ಪ್ರಕಾಶ ಮಲ್ಪೆ ವಹಿಸಲಿದ್ದಾರೆ ಎಂದು ಹೇಳಿದರು.
ಹಿಂ.ಜಾ.ವೇ ಜಿಲ್ಲಾ ಪ್ರಮುಖ ದಿನೇಶ ನಾಯ್ಕ ಮಾತನಾಡಿ, ನಾವು ಹೊಸ ವರ್ಷದ ಆಚರಣೆಯನ್ನು ಜನವರಿಯಲ್ಲಿ ಮಾಡುವ ಬದಲು ಯುಗಾದಿಗೆ ಮಾಡಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ತಾಲೂಕಿನ ಗಡಿ ಭಾಗವಾದ ಗೊರಟೆಯಿಂದ ಬೈಲೂರಿನತನಕ ಎಲ್ಲರನ್ನೂ ಸಂಪರ್ಕ ಮಾಡಿದ್ದೇವೆ ಎಂದರು. ಸಹ ಸಂಚಾಲಕರಾದ ಕುಮಾರ ನಾಯ್ಕ, ರಾಘವೇಂದ್ರ ನಾಯ್ಕ, ಹಿಂ.ಜಾ.ವೇ ಜಿಲ್ಲಾ ಪ್ರಮುಖ ಈಶ್ವರ ಇದ್ದರು. ಶ್ರೀನಿವಾಸ ಹನುಮಾನಗರ ಸ್ವಾಗತಿಸಿದರು.