

ಮಂಡ್ಯ: ಕೆ.ಆರ್.ಪೇಟೆ ತಾಲೂಕು ಬೇವಿನಹಳ್ಳಿ ಗ್ರಾಮದ ದೇಗುಲದಲ್ಲಿ ಚಾಮುಂಡೇಶ್ವರಿ ವರ್ಧಂತಿ ಪ್ರಯುಕ್ತ ಸಮೀಪದ ವಿಶೇಷ ಪೂಜೆ ನೆರವೇರಿತು.
ಅರ್ಚಕ ರಾಜಣ್ಣ ನೇತೃತ್ವದಲ್ಲಿ ನಡೆದ ಪೂಜಾ ಮಹೋತ್ಸವದಲ್ಲಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಭಕ್ತರು ಭಾಗವಹಿಸಿದ್ದರು. ಮೂರು ದಿನಗಳವರೆಗೆ ಜರುಗಿದ ಪೂಜಾ ಮಹೋತ್ಸವದಲ್ಲಿ ನಿತ್ಯ ದೇವಿಗೆ ಗಂಗಾಜಲಾಭಿಷೇಕ, ಪಂಚಾಮೃತಾಭಿಷೇಕ, ಹೋಮ ಜರುಗಿದವು. ದೇವಿಗೆ ವಿವಿಧ ಪುಷ್ಪಗಳಿಂದ ಅಲಂಕರಿಸಿ, ಒಡವೆ ಆಭರಣಗಳಿಂದ ಸಿಂಗರಿಸಲಾಗಿತ್ತು. ಭಕ್ತರಿಗೆ ಅನ್ನದಾಸೋಹ ಆಯೋಜಿಸಲಾಗಿತ್ತು.
ಅಮ್ಮನವರನ್ನು ತೂಗುಯ್ಯಲೆಯಲ್ಲಿ ತೂಗಿ ಆರತಿ ಬೆಳಗಲಾಯಿತು. ವರ್ಧಂತಿ ಅಂಗವಾಗಿ ಶನಿಪ್ರಭಾವ ನಾಟಕ ಪ್ರದರ್ಶನ ನಡೆಯಿತು. ದೇಗುಲ ಸಮಿತಿಯಿಂದ ಅಂಗವಿಲರಿಗೆ ಸಹಾಯಧನ ನೀಡಲಾಯಿತು. ಗ್ರಾಮದ ಸುತ್ತ ಪ್ರಮುಖ ಬೀದಿಯಲ್ಲಿ ದೇವಿಯ ಮೆರವಣಿಗೆ ಮಾಡಲಾಯಿತು.
ಅರ್ಚಕ ರಾಜೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ರವಿ, ಕೋಲಾರ ಬಾಬು ಮೌನಿ, ಶ್ರೀನಿವಾಸಪುರ ಶಂಕರೇಗೌಡ, ಬನಶಂಕರಿ ಪ್ರತೀಶ್, ಹರೀಶ್, ಪ್ರಶಾಂತ್, ಮಂದಗೆರೆ ಪ್ರಕಾಶ್, ವೆಂಕಟೇಶ್, ಬೇವಿನಹಳ್ಳಿ ಗೆಳೆಯರ ಬಳಗದವರು ಹಾಜರಿದ್ದರು.