ಕ್ಷೇತ್ರದಲ್ಲಿ ಜೋರಾಯ್ತು ಬೆಟ್ಟಿಂಗ್ ಭರಾಟೆ

betting..
ಸಾಂಧರ್ಭಿಕ ಚಿತ್ರ
Published on

ಲೋಕಸಭೆ ಚುನಾವಣೆ ಲಿತಾಂಶಕ್ಕೆ ದಿನಗಣನೆ - ಪ್ರಮುಖ ಪಕ್ಷಗಳಿಗೆ ಗೆಲ್ಲುವ ವಿಶ್ವಾಸ


ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ದಿನಗಣನೆ ಪ್ರಾರಂಭವಾಗಿರುವ ನಡುವೆ ಕ್ಷೇತ್ರದಲ್ಲಿ ನಾನಾ ಲೆಕ್ಕಾಚಾರಗಳಲ್ಲಿ ಬೆಟ್ಟಿಂಗ್ ಪ್ರಕ್ರಿಯೆ ಮತ್ತಷ್ಟು ಜೋರಾಗಿದೆ.
ಹೌದು! ಪ್ರತಿ ಬಾರಿಯಂತೆ ಈ ಬಾರಿಯೂ ಚುನಾವಣಾ ಕದನದಲ್ಲಿ ನಾನಾ ನೀನಾ ಎನ್ನುವಂತೆ ತೀವ್ರ ಪೈಪೋಟಿ ಕಂಡು ಬಂದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಸಹ ಗೆಲುವಿನ ವಿಶ್ವಾಸ ವ್ಯಕ್ತಪಡಿಸುತ್ತಿವೆ. ಇದರ ಉತ್ಸಾಹದಲ್ಲಿ ಪರಿಚಿತರೊಂದಿಗೆ ಬೆಟ್ಟಿಂಗ್ ಕಟ್ಟಲು ಸವಾಲು ಎಸೆಯಲಾಗುತ್ತಿದೆ. ಆದರೆ, ಇದು 2019ರ ಲೋಕಸಭಾ ಚುನಾವಣೆಯ ಸಂದರ್ಭಕ್ಕೆ ಹೋಲಿಸಿದ್ದಲ್ಲಿ ಪ್ರಮಾಣ ಕಡಿಮೆಯಾಗಿದೆಯಷ್ಟೇ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿವೆ.


ಬೆಟ್ಟಿಂಗ್ ಕಟ್ಟುವ ಉತ್ಸಾಹ
ಈಗ ಎಲ್ಲರ ಚಿತ್ತ ಜೂ.4ರ ಚುನಾವಣಾ ಫಲಿತಾಂಶ ಹೊರ ಬೀಳುವುದರತ್ತ ಇದೆ. ಏ.26ರಂದು ಮತದಾನ ಪ್ರಕ್ರಿಯೆ ನಡೆದಿದ್ದು, ಒಂದು ತಿಂಗಳು ಕಳೆದಿದೆ. ಇತ್ತೀಚೆಗೆ ಅಭ್ಯರ್ಥಿಗಳ ಸೋಲು-ಗೆಲುವಿನ ಬಗ್ಗೆಯೇ ಎಲ್ಲೆಡೆ ಚರ್ಚೆಯಾಗುತ್ತಿದ್ದು, ತೀವ್ರ ಕುತೂಹಲ, ಸ್ವಸಮರ್ಥನೆಯೂ ಜೋರಾಗಿದೆ. ಇದರಲ್ಲಿನ ಪ್ರತಿಷ್ಠೆ ಬೆಟ್ಟಿಂಗ್‌ಗೆ ಕಾರಣವಾಗಿದೆ.


ಹಲವೆಡೆ ಬಾಜಿ
ಪ್ರಸ್ತುತ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್. ರಕ್ಷಾರಾಮಯ್ಯ ಮತ್ತು ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ಸೋಲು ಗೆಲುವಿಗೆ ಸಂಬಂಧಿಸಿದಂತೆ ಮಾತ್ರ ಬೆಟ್ಟಿಂಗ್ ನಡೆಯುತ್ತಿದೆ. ಅದರಲ್ಲೂ ಕಮಲದ ಪರ ಹೆಚ್ಚು, ಕೈ ಪರ ಕಡಿಮೆ ಬಾಜಿ ಕಟ್ಟಲು ಬಯಸಲಾಗುತ್ತಿದೆ. ಪ್ರಸ್ತುತ ಹಣ ಮತ್ತು ಒಡವೆಯನ್ನು ಪಣಕ್ಕಿಡಲಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಮುಖಂಡರೊಬ್ಬರು ಸ್ವಪಕ್ಷೀಯ ಅಭ್ಯರ್ಥಿಯ ಗೆಲುವಿನ ಪರ 10 ಲಕ್ಷ ರೂ. ಬಾಜಿ ಕಟ್ಟಿದ್ದಾರೆ. ಜೆಡಿಎಸ್ ಯುವ ಮುಖಂಡನೊಬ್ಬ ಮೈತ್ರಿ ಅಭ್ಯರ್ಥಿಗೇ ಗೆಲುವು ಎಂಬುದಾಗಿ ಹೇಳಿ 35 ಸಾವಿರ ರೂ. ಮತ್ತು ಖಾಸಗಿ ಫೈನಾನ್ಸ್ ಸಂಸ್ಥೆಯ ಮಾಲೀಕರೊಬ್ಬರು 50 ಸಾವಿರ ರೂ. ಕಟ್ಟಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಪರವಾಗಿಯೂ ಬೆಟ್ಟಿಂಗ್ ನಡೆಯುತ್ತಿದೆ.


ಗೆಲುವಿನ ಅಂತರದ ಜಪ
ಮತದಾನ ಮುಗಿಯುತ್ತಿದ್ದಂತೆ ಸುಳ್ಳು ಸಮೀಕ್ಷಾ ವರದಿಗಳು ಜೋರಾಗಿದೆ. ಒಂದೆಡೆ ಗರಿಷ್ಠ 1 ಲಕ್ಷ ಲೀಡ್, ಮತ್ತೊಂದೆಡೆ ಕನಿಷ್ಠ 15 ಸಾವಿರ ಮತಗಳ ಅಂತರದ ಗೆಲುವಿನ ಜಪವಾಗುತ್ತಿದೆ.
ಮತ ಎಣಿಕೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಈಗಾಗಲೇ ಆಯಾ ಕ್ಷೇತ್ರದ ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳ ಮೂಲಕ ಮೊದಲ ಹಂತದಲ್ಲಿ ಏಜೆಂಟರ ಪಟ್ಟಿಯನ್ನು ತಯಾರಿಸಿದ್ದು, ಇದರ ಜತೆಗೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರದ ಹೆಸರಿನಲ್ಲಿ ಮುಖಂಡರನ್ನೊಳಗೊಂಡ ಸಭೆಯನ್ನು ನಡೆಸಿ ಚರ್ಚಿಸಿದ್ದಾರೆ. ಇದೇ ವೇಳೆ ಬೂತ್ ಮಟ್ಟದಲ್ಲಿ ಮತ ಗಳಿಕೆ ಮತ್ತು ಕೈತಪ್ಪಿದ ಪ್ರಮಾಣ, ಸಾಧಕ ಬಾಧಕ, ವೈಫಲ್ಯ ಸೇರಿ ನಾನಾ ರೀತಿಯಲ್ಲಿ ಲೆಕ್ಕಾಚಾರ ಹಾಕಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ನಾನಾ ಸಂದೇಶಗಳೂ ವೈರಲ್ ಆಗುತ್ತಿವೆ.


ಫಲಿತಾಂಶದ ತಲೆಬಿಸಿ
ಮೇಲ್ನೋಟಕ್ಕೆ ಬಿಜೆಪಿಯ ಅಬ್ಬರ, ಆಂತರಿಕವಾಗಿ ಕಾಂಗ್ರೆಸ್ ಮೇಲುಗೈ ಮಾತುಗಳು ಫಲಿತಾಂಶದ ಬಗೆಗಿನ ಕುತೂಹಲ ಹೆಚ್ಚಿಸಿವೆ. ಇದರ ಬಗೆಗಿನ ಚರ್ಚೆಯು ತಲೆಬಿಸಿ ಮಾಡುತ್ತಿದ್ದು ಯಾರ ಗೆಲುವು? ಯಾರ ಸೋಲು? ಮತದಾರರ ಒಲವು? ಲಾಭ ನಷ್ಟದ ಲೆಕ್ಕಾಚಾರಗಳಲ್ಲಿ ಆತಂಕ, ಗೊಂದಲಗಳು ದೂರವಾಗಿಲ್ಲ. ಆಯಾ ವ್ಯಾಪ್ತಿಯ ಏಜೆಂಟರು ಮತ್ತು ಮುಖಂಡರು ಬೆಳವಣಿಗೆಗಳ ಬಗ್ಗೆ ಅಭ್ಯರ್ಥಿಗಳಿಗೆ ಮಾಹಿತಿ ನೀಡಿದ್ದು ಇದರಲ್ಲಿ ಯಾರ ಲೆಕ್ಕಾಚಾರ ಸತ್ಯವಾಗುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ. ಇದಕ್ಕೆಲ್ಲ ಜೂ.4ರಂದು ಉತ್ತರ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net