

ಎನ್.ಮುನಿವೆಂಕಟೇಗೌಡ ಕೋಲಾರ
ಜಿಲ್ಲೆಯಲ್ಲಿ ಪ್ರಸ್ತುತ ಐಪಿಎಲ್ ಬೆಟ್ಟಿಂಗ್ ದಂಧೆ ಜೋರಾಗಿದ್ದು, ಜಿಲ್ಲೆಯ ಇಬ್ಬರು ಶಾಸಕರು ಸಾರ್ವಜನಿಕವಾಗಿಯೇ ಈ ಬಗ್ಗೆ ಧ್ವನಿ ಎತ್ತುತ್ತಿದ್ದರೂ ಪೊಲೀಸ್ ಇಲಾಖೆ ಮಾತ್ರ ದಂಧೆಗೆ ಕಡಿವಾಣ ಹಾಕುವಲ್ಲಿ ಎಡವಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಜಿಲ್ಲೆಯ ಯಾವುದೇ ಕಾರ್ಯಕ್ರಮ ಅಥವಾ ಇಲಾಖೆಗಳ ಸಭೆಯಲ್ಲಿ ಈ ವಿಚಾರವನ್ನು ಪದೇಪದೆ ಪ್ರಸ್ತಾಪ ಮಾಡುತ್ತಲೇ ಇದ್ದಾರೆ. ದಂಧೆಯಿಂದ ಸಾವು&ನೋವು ಆಗದಂತೆ ಎಚ್ಚರ ವಹಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಹಿಡಿದು ಎಲ್ಲರಿಗೂ ಸೂಚನೆ ನೀಡಿದರೂ ಕಡಿವಾಣ ಬಿದ್ದಿಲ್ಲ.
ಅನೇಕ ಬಾರಿ ಬೆಟ್ಟಿಂಗ್ ದಂಧೆಗೆ ಸಿಲುಕಿದವರು ಹಣ ಕಳೆದುಕೊಂಡದ್ದಲ್ಲದೇ ಮನೆಯಲ್ಲಿ ತಂದೆ&ತಾಯಿ ಕೂಡಿಟ್ಟ ಹಣ, ಬಂಗಾರ ಕಳವು ಮಾಡಿ ಬೆಟ್ಟಿಂಗ್ ಆಡುತ್ತಿದ್ದು, ಅದು ಸಾಲದೇ ಸಾಲ ಮಾಡಿಯೋ, ಬಡ್ಡಿಗೆ ಹಣ ಪಡೆದೋ ಬೆಟ್ಟಿಂಗ್ನಲ್ಲಿ ಹಾಕುತ್ತಿದ್ದಾರೆ. ಕೊನೆಗೆ ಮಾಡಿದ ಸಾಲ ತೀರಿಸಲಾಗದೆ, ಮನೆಯಲ್ಲಿ ಕದ್ದ ವಿಚಾರವನ್ನೂ ತಿಳಿಸಲಾಗದೆ ಜೀವನಕ್ಕೇ ವಿದಾಯ ಹೇಳುವ ಹಂತಕ್ಕೆ ತಲುಪಿದ್ದಾರೆ.
ಅದೆಷ್ಟೋ ಬಾರಿ ಶಾಸಕರೇ ನೇರವಾಗಿ ಪೊಲೀಸರ ಮೇಲೆ ಆರೋಪ ಮಾಡಿದ್ದಾರೆ. ಆಡಳಿತ ಮತ್ತು ವಿರೋಧ ಪಕ್ಷದ ಇಬ್ಬರು ಶಾಸಕರು ಬೆಟ್ಟಿಂಗ್ ವಿರುದ್ಧ ಸಮರ ಸಾರುತ್ತಿದ್ದರೆ, ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ತಲೆಕೆಡಿಸಿಕೊಳ್ಳದೆ ಓಡಾಡುತ್ತಿರುವುದನ್ನು ನೋಡಿದರೆ ಪರೋಕ್ಷವಾಗಿ ಪೊಲೀಸರೇ ದಂಧೆಗೆ ಸಹಕಾರ ನೀಡುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಇತ್ತೀಚೆಗೆ ಶಾಸಕರ ಗರ್ಜನೆಗೆ ಸ್ವಲ್ಪ ಮೈ ಕೊಡವಿದ ನಂಗಲಿ ಪೊಲೀಸರು 4&5 ಪಡ್ಡೆ ಹುಡುಗರನ್ನು ಠಾಣೆಗೆ ಕರೆಸಿ ಸಂಜೆಯವರೆಗೂ ಕೂರಿಸಿ ನಂತರ ಠಾಣೆ ಜಾಮೀನು ಮೇಲೆ ಬಿಟ್ಟು ಕಳುಹಿಸಿದ್ದು ಹೊರೆತುಪಡಿಸಿದರೆ ಯಾವುದೇ ಕಾನೂನು ಕ್ರಮವಾಗಿಲ್ಲ ಎನ್ನಲಾಗಿದೆ.
ಇದರಲ್ಲಿ ಕೆಲ ಪೊಲೀಸರೇ ಬೇನಾಮಿಗಳ ಮೂಲಕ ಆ್ಯಪ್ ಡೌನ್ಲೋಡ್ ಮಾಡಿಸಿ ಅವರ ಮೂಲಕ ಹಣ ಮಾಡಲು ಹೊರಟಿದ್ದಾರೆ. ಕಳೆದ ವರ್ಷ ಮುಳಬಾಗಿಲು ಪೊಲೀಸ್ ಠಾಣೆಯ ಪೇದೆಯೊಬ್ಬರ ಬೆಟ್ಟಿಂಗ್ ದಂಧೆಯ ಬಗ್ಗೆ ಮಾಹಿತಿ ಪಡೆದು ಆಗಿನ ಎಸ್ಪಿ ತನಿಖೆಗೆ ಆದೇಶಿಸಿದರೆ ಆ ಪೇದೆ ಆತ್ಮಹತ್ಯೆಯ ಹೈಡ್ರಾಮ ಮಾಡಿ ತನಿಖೆಯಿಂದ ತಪ್ಪಿಸಿಕೊಂಡ ಪ್ರಸಂಗ ನಡೆದಿತ್ತು. ಕಾಲ ಕಾಲಕ್ಕೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಇದನ್ನು ಕೆಲವರು ಅಲ್ಲಗಳೆಯುತ್ತಿದ್ದು, ಇಲಾಖೆ ಬಳಿ ಅಂಕಿ ಅಂಶ ಇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಫಾರಿನ್ನಲ್ಲಿ ಕುಳಿತು ಸಂದೇಶ : ಐಪಿಎಲ್ ಪ್ರಾರಂಭವಾಗುತ್ತಿದ್ದಂತೆ ಹೊರರಾಜ್ಯಗಳಿಗೆ ಮತ್ತು ವಿದೇಶಕ್ಕೆ ಹಾರುವ ಬೆಟ್ಟಿಂಗ್ನ ಕಿಂಗ್ ಪಿನ್ಗಳು ವಿದೇಶದಲ್ಲಿ ಕುಳಿತು ತಮ್ಮದೇ ಆ್ಯಪ್ಗಳ ಮೂಲಕ ಬೆಟ್ಟಿಂಗ್ ದಂಧೆ ಶುರು ಹಚ್ಚಿಕೊಂಡು ಸ್ಥಳಿಯ ಯುವಕರನ್ನು ಬೆಟ್ಟಿಂಗ್ ದಂಧೆಗೆ ಬಳಸಿಕೊಳ್ಳುತ್ತಿದ್ದಾರೆ. ೇಮವಾಗಿ ವಿದೇಶದಲ್ಲಿ ಕುಳಿತು ಆಡಲು ಸಹಕರಿಸುತ್ತಿರುವ ಪೊಲೀಸರ ಹೊಟ್ಟೆ ತುಂಬಿಸಲು ಕಿಂಗ್ಪಿನ್ಗಳು ಸ್ಥಳಿಯವಾಗಿ ಯಾವ ವ್ಯಕ್ತಿ ಎಷ್ಟು ಲಾಭ ಗಳಿಸಿದ ಎಂಬುದರ ಬಗ್ಗೆ ವಾಟ್ಸಾಪ್ ಮೂಲಕ ಪೊಲೀಸರಿಗೆ ಸಂದೇಶ ರವಾನಿಸುತ್ತಾರೆ. ಈ ಮಾಹಿತಿ ಮೇರೆಗೆ ಮಾರನೇ ದಿನ ಪೊಲೀಸರು ಬೆಟ್ಟಿಂಗ್ನಲ್ಲಿ ಹೆಚ್ಚು ಲಾಭ ಗಳಿಸಿದವನ ಮನೆಯ ಬಾಗಿಲು ತಟ್ಟಿ, ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಸುತ್ತಾರೆ. ಪೊಲೀಸರ ಬೆದರಿಕೆಗೆ ಹೆದರಿದವರು ಗೆದ್ದ ಹಣದಲ್ಲಿ ಒಂದಿಷ್ಟು ಹಣವನ್ನು ಪೊಲೀಸರ ಜೇಬು ತುಂಬಿಸಿ ಕಳುಹಿಸಿಕೊಡುತ್ತಾರೆ ಎಂಬ ಆರೋಪ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.
ಐಪಿಎಲ್ ಬೆಟ್ಟಿಂಗ್ ಎನ್ನುವುದು ಜಿಲ್ಲೆಯಲ್ಲಿ ದೊಡ್ಡ ದಂಧೆಯಾಗಿದೆ. ದಂಧೆ ನಿಯಂತ್ರಿಸಲು ಪೊಲೀಸ್ ಇಲಾಖೆಗೆ ಹಲವು ಬಾರಿ ಸೂಚಿಸಿದ್ದೇನೆ. ಆದರೆ, ಪೊಲೀಸರು ಮಾತ್ರ ಕಿಂಗ್ಪಿನ್ಗಳ ಮುಲಾಜಿಗೆ ಬಿದ್ದಂತೆ ಕಾಣುತ್ತಿದೆ. ಹೀಗೇ ಮುಂದುವರಿದರೆ ತಲೆದಂಡ ಗ್ಯಾರಂಟಿ. | ಕೊತ್ತೂರು ಜಿ.ಮಂಜುನಾಥ್ ಕೋಲಾರ ಶಾಸಕ ಗಡಿ ತಾಲೂಕಾಗಿರುವ ಮುಳಬಾಗಿಲು ತಾಲೂಕಿನಲ್ಲಿ ಬೆಟ್ಟಿಂಗ್ ಜೋರಾಗಿಯೇ ನಡೆಯುತ್ತಿದೆ. ಯುವಕರು ಐಪಿಎಲ್ ಬೆಟ್ಟಿಂಗ್ಗೆ ಬೇಗ ಆಕರ್ಷಿತರಾಗುತ್ತಿದ್ದಾರೆ. ಪೊಲೀಸ್ ಇಲಾಖೆ ದಯವಿಟ್ಟು ಬೆಟ್ಟಿಂಗ್ನಲ್ಲಿ ಭಾಗಿಯಾಗಿರುವ ಪ್ರಮುಖ ಕಿಂಗ್ಪಿನ್ಗಳನ್ನು ಹಿಡಿದು ಕಾನೂನು ಕ್ರಮ ಕೈಗೊಂಡರೆ ದಂಧೆಗೆ ಕಡಿವಾಣ ಹಾಕಬಹುದು. | ನಂಗಲಿ ಕಿಶೋರ್ ಸಾಮಾಜಿಕ ಹೋರಾಟಗಾರ ಜಿಲ್ಲೆಯಲ್ಲಿ ಬೆಟ್ಟಿಂಗ್ ದಂಧೆ ಜೋರಾಗಿದ್ದು, ಅದನ್ನು ತಡೆಯಬೇಕಿದ್ದ ಪೊಲೀಸ್ ಇಲಾಖೆ ದಂಧೆಕೋರರೊಂದಿಗೆ ಶಾಮೀಲಾಗಿ ಜಿಲ್ಲೆಯ ಯುವಕರ ಜೀವ ಮತ್ತು ಜೀವನದ ಜತೆ ಚೆಲ್ಲಾಟವಾಡುತ್ತಿದೆ. ಜಿಲ್ಲೆಯ ಪೊಲೀಸ್ ನಿಷ್ಕಿ$ಯದ ಬಗ್ಗೆ ಸವಿಸ್ತಾರವಾಗಿ ಪೊಲೀಸ್ ಮಹಾ ನಿರ್ದೇಶಕರಿಗೆ ಮತ್ತು ಗೃಹ ಸಚಿವರಿಗೆ ಪತ್ರ ಬರೆದು ಮನವರಿಕೆ ಮಾಡಿಕೊಟ್ಟಿದ್ದೇನೆ, ಮುಂದಿನ ದಿನಗಳಲ್ಲಿ ಅವರ ಮೇಲೆ ಕ್ರಮ ಜರುಗಿಸುವ ನಿರೀೆಯಲ್ಲಿದ್ದೇನೆ. | ಸಮೃದ್ಧಿ ಮಂಜುನಾಥ್ ಶಾಸಕ, ಮುಳಬಾಗಿಲು