

ಬರಗೂರು: ನ್ಯಾನೋ ಟೆಕ್ನಾಲಜಿ ಗೊಬ್ಬರದ ಅನ್ವೇಶಣೆ ಭಾರತದಲ್ಲೇ ನಡೆದಿದ್ದು, ಈ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಜತೆಗೆ ಉತ್ತಮ ಇಳುವರಿ ಪಡೆಯಲು ಸಹಕಾರಿಯಾಗಲಿದೆ ಎಂದು ಹುಲಿಕುಂಟೆ ಹೋಬಳಿ ಕೃಷಿ ಇಲಾಖೆ ಅಧಿಕಾರಿ ಹೆಚ್.ಜಿ.ಸತ್ಯನಾರಾಯಣ್ ಹೇಳಿದರು.
ಬೆಳೆ ಪ್ರಾತ್ಯಕ್ಷಿಕೆಯಡಿ ಶಿರಾ ತಾಲೂಕು ಬರಗೂರು ರೈತ ಸಂಪರ್ಕ ಕೇಂದ್ರದಿಂದ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈತ ಗೋವಿಂದಪ್ಪ ಅವರ ಜಮೀನಿನಲ್ಲಿ ಬೆಳೆದಿದ್ದ ರಾಗಿ ಪೈರಿಗೆ ಡ್ರೋನ್ ಮೂಲಕ ಔಷಧ ಸಿಂಪಡಣೆ ಪ್ರಾತ್ಯಕ್ಷಿಕೆಯನ್ನು ರೈತರಿಗೆ ಪರಿಚಯಿಸಿ ಮಾತನಾಡಿದರು.
ನಾವು ಕಂಡಂತೆ ನಮಗೆ ಯೂರಿಯಾ ಸಿಗುತ್ತಿಲ್ಲ. ಕೇಂದ್ರ ಸರ್ಕಾರದಿಂದ ರಸಗೊಬ್ಬರಕ್ಕೆ ಹೆಚ್ಚು ಸಬ್ಸಿಡಿ ಹಣ ಹೋಗುತ್ತದೆ. ಇದನ್ನು ಗಮನಿಸಿದ ಸರ್ಕಾರ ನ್ಯಾನೋ ಟೆಕ್ನಾಲಜಿಯನ್ನು ಅಳವಡಿಸಲಾಗುತ್ತಿದೆ. ಪಂಜಾಬ್ ಹಾಗೂ ಕರ್ನಾಟಕದ ತುಂಗಭದ್ರಾ ಹಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚು ಯೂರಿಯಾ ಗೊಬ್ಬರ ಬಳಸುವುದರಿಂದ ಹೆಚ್ಚು ಭತ್ತ ಬೆಳೆಯುತ್ತಿದ್ದು, ಆ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದೆ. ನ್ಯಾನೋ ಯೂರಿಯಾ ಬಳಕೆಯಿಂದ ಉತ್ತಮ ಇಳುವರಿಯ ಜತೆಗೆ ಭೂಮಿಯ ಫಲವತ್ತೆ ಕಾಣಬಹುದು ಎಂದರು.
ಇಫ್ರೋ ಸಂಸ್ಥೆಯ ಶಿವಣ್ಣ ಮಾತನಾಡಿ, ನ್ಯಾನೋ ಟೆಕ್ನಾಲಜಿ ಬಳಸುವುದರಿಂದ ಮಣ್ಣಿನ ಫಲವತ್ತತೆ ಉಳಿಸುವ, ಯೂರಿಯಾ ಅಭಾವ ಕಡಿಮೆ ಮಾಡುವ, ಸಬ್ಸಿಡಿ ಉಳಿತಾಯ ಮಾಡಬಹುದು. ಯೂರಿಯಾಗಿಂತಲೂ ನ್ಯಾನೋ ಟೆಕ್ನಾಲಜಿಯಿಂದ ಉತ್ತಮ ಫಲಿತಾಂಶ ಬರುತ್ತಿದೆ ಎಂದರು.
ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಪಕರಾದ ಕೀರ್ತಿ, ಗ್ರಾಪಂ ಅಧ್ಯಕ್ಷೆ ಯಶೋಧಾ ದೇವರಾಜು, ಸದಸ್ಯ ರಂಗನಾಥ್, ಮುಖಂಡರಾದ ರಮೇಶ್, ಭರತ್, ಗಿರೀಶ್ ಕಾಟನಹಳ್ಳಿ, ರಾಮಕೃಷ್ಣಪ್ಪ, ರಾಧಾಕೃಷ್ಣ, ವೇಣುಗೋಪಾಲ್ ಇತರರು ಇದ್ದರು.