ಆರೋಗ್ಯಕರ ಜೀವನದಿಂದ ಉತ್ತಮ ಸಮಾಜ: ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ ಅಭಿಮತ

3
Published on

ಮೈಸೂರು: ಸಮಾಜ ಆರೋಗ್ಯಕರವಾಗಿ ಇರಬೇಕಾದರೆ ಜನರು ಆರೋಗ್ಯವಂತರಾಗಿರಬೇಕು. ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಅಭಿಪ್ರಾಯಪಟ್ಟರು.
ಅನ್ವೇಷಣಾ ಸೇವಾ ಟ್ರಸ್ಟ್‌ನಿಂದ ನಗರದ ಇಂಜಿನಿಯರ್ಸ್‌ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ವಿಶ್ವ ವೈದ್ಯರ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದರು. ಎಲ್ಲರೂ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಂಡರೆ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ವೈದ್ಯರು ತಮ್ಮ ಜೀವನವನ್ನು ಬಡವರು, ರೋಗಿಗಳ ಜೀವನಕ್ಕಾಗಿ ಮುಡುಪಾಗಿಟ್ಟು ಸೇವೆ ಸಲ್ಲಿಸುತ್ತಾರೆ. ಬೇರೆಯವರ ಆರೋಗ್ಯ ಕಾಪಾಡಲು ಶ್ರಮಿಸುತ್ತಾರೆ. ಆ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಈ ಹಿಂದೆ ಪ್ಲೇಗ್, ಕಾಲರಾ, ದಡಾರದಂತಹ ಸಾಂಕ್ರಾಮಿಕ ಕಾಯಿಲೆಗಳು ಸಮುದಾಯದ ತುಂಬ ವ್ಯಾಪಿಸುತ್ತಿದ್ದವು. ಇದೀಗ ಆ ರೋಗಗಳು ನಿಯಂತ್ರಣಕ್ಕೆ ಬಂದಿವೆ. ಆದರೆ ವೈರಸ್‌ಗಳಿಂದ ಹರಡುವ ರೋಗಗಳು ಹೆಚ್ಚಾಗುತ್ತಿವೆ ಎಂದು ವಿಷಾದಿಸಿದರು.
ಬಿಪಿ, ಶುಗರ್ ಮಾತ್ರವಲ್ಲದೆ, ಜೀವನ ಶೈಲಿ, ಆಹಾರ ಪದ್ಧತಿಯಿಂದಲೂ ಸಾಕಷ್ಟು ಆರೋಗ್ಯ ಸಮಸ್ಯೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಕಾಲ ಕಾಲಕ್ಕೆ ತಪಾಸಣೆ ಮಾಡಿಸಿಕೊಂಡು ಆರೋಗ್ಯವಂತರಾಗಲು ಬದ್ಧರಾಗಬೇಕು. ಸಾಮಾಜಿಕ ಪಿಡುಗಾಗಿರುವ ಬಡತನ, ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ಅನಿವಾರ್ಯತೆ ಇದೆ ಎಂದರು.
ಪ್ರತಿ ವರ್ಷ ಜು.1ರಂದು ವಿಶ್ವ ವೈದ್ಯರ ದಿನ ಆಚರಿಸಲಾಗುತ್ತಿದ್ದು, ಆ ಮೂಲಕ ವೈದ್ಯಕೀಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ ಹಿರಿಯ ವೈದ್ಯರೂ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿಯೂ ಆದ ಡಾ.ಬಿ.ಸಿ.ರಾಯ್ ಅವರ ಸೇವೆಯನ್ನು ಸ್ಮರಿಸಲಾಗುತ್ತದೆ ಎಂದು ಹೇಳಿದರು.
ಡಾ.ಬಿ.ಸಿ.ರಾಯ್ ಅವರು ಜನಪ್ರಿಯ ವೈದ್ಯರಾಗಿದ್ದು, ಅವರನ್ನು ಕಾಂಗ್ರೆಸ್ ರಾಜಕೀಯ ಕ್ಷೇತ್ರಕ್ಕೆ ಕರೆತಂದು 12 ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆಯನ್ನು ನಿಭಾಯಿಸಲು ಅವಕಾಶ ನೀಡಿತ್ತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಿದ್ದರೂ ಪ್ರತಿದಿನ ಸಂಜೆ ವೇಳೆ ಜನರಿಗೆ ಆರೋಗ್ಯ ಸೇವೆ ನೀಡುತ್ತಿದ್ದರು. ಅಧಿಕಾರವಿದ್ದರೂ ವೈದ್ಯ ವೃತ್ತಿಯನ್ನು ಮರೆಯಲಿಲ್ಲ. ಅವರ ವಿಶಿಷ್ಟ ಸೇವೆಯಿಂದಾಗಿ ‘ಪಶ್ಚಿಮ ಬಂಗಾಳದ ಶ್ರೇಷ್ಠ ಶಿಲ್ಪಿ’ ಎಂಬ ಬಿರುದು ಲಭಿಸಿದೆ ಎಂದರು.
ಜು.1ರಂದೇ ಜನಿಸಿದ್ದ ರಾಯ್ ಅವರು ಕಾಕತಾಳೀಯ ಎಂಬಂತೆ ಜು.1ರಂದೇ ಮರಣ ಹೊಂದಿದರು. ಈ ಹಿನ್ನೆಲೆಯಲ್ಲಿ ಭಾರತದ ಎಲ್ಲ ವೈದ್ಯಕೀಯ ಸಂಘಟನೆಗಳು ಒಮ್ಮತದಿಂದ ಜು.1ರಂದೇ ಸೇರಿ ವಿಶ್ವವೈದ್ಯರ ದಿನ ಆಚರಿಸಲು ನಿರ್ಧರಿಸಿ ಗೌರವ ಸಮರ್ಪಿಸುತ್ತಿವೆ ಎಂದು ವಿವರಿಸಿದರು.
ಹಿರಿಯ ವೈದ್ಯರಾದ ಡಾ.ಮಾದಪ್ಪ, ಡಾ.ಹರ್ಷ ಬಸಪ್ಪ, ಡಾ.ಎಸ್.ರವಿಶಂಕರ್, ಡಾ.ಸಂದೀಪ್ ಹಾಗೂ ಡಾ.ಎಸ್.ಜಯಶ್ರೀ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಎಂ.ಲೋಕನಾಥ್ ಅವರು ‘ವೈದ್ಯಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಪ್ರೊ.ಎಂ.ಪುಷ್ಪಾವತಿ ಅಧ್ಯಕ್ಷತೆ ವಹಿಸಿದ್ದರು. ಅನ್ವೇಷಣಾ ಸೇವಾ ಟ್ರಸ್ಟ್‌ನ ಆರ್ಯ ಅಮರನಾಥ ರಾಜೇ ಅರಸ್, ಮೈಸೂರು ಮೆಡಿಕಲ್ ಕಾಲೇಜು ವಿಶ್ರಾಂತ ಡೀನ್ ಡಾ.ಎಚ್.ಹನುಮಂತಪ್ಪ, ಚುಟುಕು ಸಾಹಿತ್ಯ ಪರಿಷತ್‌ನ ಡಾ.ಎಂಜಿಆರ್ ಅರಸ್, ಅನ್ವೇಷಣಾ ಸೇವಾ ಟ್ರಸ್ಟ್ ಉಪಾಧ್ಯಕ್ಷ ಎಚ್‌ಎಂಟಿ ಲಿಂಗರಾಜೇ ಅರಸ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net