

ಚಿಕ್ಕಮಗಳೂರು: ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಸ್ವಯಂ ಜಾಗೃತಿ ಮೂಡಿಸಿಕೊಂಡಾಗ ಉತ್ತಮ ಆರೋಗ್ಯ ಪಡೆಯಬಹುದಾಗಿದೆ. ಈ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಡಿಸಿ ಮೀನಾ ನಾಗರಾಜ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯಿಂದ ನಡೆದ ಜಿಲ್ಲಾ ಸಮಗ್ರ ರೋಗಗಳ ಕಣ್ಗಾವಲು ಸಮಿತಿಯ ತುರ್ತು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇತ್ತೀಚಿಗೆ ಕೆಎಫ್‌ಡಿ ಪ್ರಕರಣಗಳು ಹೆಚ್ಚಾಗಿರುತ್ತಿವೆ. ಎಲ್ಲಿ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದೆಯೋ ಅಲ್ಲಿ ತೀವ್ರ ನಿಗಾ ವಹಿಸಿ ಸೂಕ್ತ ಚಿಕಿತ್ಸೆ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಮಂಗನ ಖಾಯಿಲೆ ನಿಯಂತ್ರಣಕ್ಕೆ ಎಲ್ಲ ರೀತಿಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕಾಡು ಹಾಗೂ ತೋಟಗಳಲ್ಲಿ ಕೆಲಸ ಮಾಡುವರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಒಣಗಿದ ಎಲೆಗಳಲ್ಲಿ ಸೋಂಕಿತ ಉಣ್ಣೆಗಳು ಇರುವ ಸಾಧ್ಯತೆಯಿರುತ್ತದೆ. ಹೀಗಾಗಿ ಒಣಗಿದ ಎಲೆಗಳನ್ನು ಮನೆಗಳ ಬಳಿ ತಂದು ಹಾಕಬಾರದು. ಮಂಗ ಸತ್ತ ಪ್ರದೇಶಗಳಿಗೆ ಸಾರ್ವಜನಿಕರು ಭೇಟಿ ನೀಡಬಾರದು. ಪ್ರವಾಸಿಗರು ಚಾರಣ ಸಮಯದಲ್ಲಿ ಉಣ್ಣೆ ಕಡಿತ ಕಂಡು ಬಂದಲ್ಲಿ ಅದನ್ನು ನಿರ್ಲಕ್ಷಿಸಬಾರದು ಎಂದು ಸಲಹೆ ನೀಡಿದರು.
ಮಂಗನ ಕಾಯಿಲೆ ಕಂಡು ಬಂದಿರುವ ಪ್ರದೇಶಗಳಲ್ಲಿ ಈ ಕಾಯಿಲೆ ನಿವಾರಣೆಗೆ ದೀಪಾ ಎಂಬ ತೈಲವನ್ನು ಆ ಭಾಗದ ಎಲ್ಲ ಕುಟುಂಬಗಳಿಗೆ ವಿತರಿಸಲಾಗಿದೆ ಹಾಗೂ ಜನರಲ್ಲಿ ಜಾಗೃತಿಯನ್ನೂ ಮೂಡಿಸಲಾಗಿದೆ. ಈ ಬಗ್ಗೆ ಆರೋಗ್ಯ, ಪಶು, ಅರಣ್ಯ ಇಲಾಖೆ ಮತ್ತು ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿ ಕಾಯಿಲೆ ಹತೋಟಿಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅದೇ ರೀತಿ ತಂಬಾಕು ಉತ್ಪನ್ನಗಳ ಬಳಕೆ ಸಂಪೂರ್ಣ ಹತೋಟಿಗೆ ತರುವ ದೃಷ್ಟಿಯಿಂದ ಎಲ್ಲ ತಾಲೂಕುಗಳಲ್ಲಿ ಜಾಗೃತಿ ದಳದಿಂದ ತಪಾಸಣೆ ಮಾಡಿ ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ತಂಬಾಕು ಉತ್ಪನ್ನಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ವ್ಯಾಪಕ ಜನಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ಡಾ. ಗೋಪಾಲಕೃಷ್ಣ, ಡಿಎಚ್‌ಒ ಡಾ. ಅಶ್ವಥ್ ಬಾಬು, ಜಿಲ್ಲಾ ಸರ್ವೇಕ್ಷಾಣಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅನುಷ್ಟಾನಾಧಿಕಾರಿಗಳು ಉಪಸ್ಥಿತರಿದ್ದರು.