ಕುಸಿಯುತ್ತಿರುವ ಬೆತ್ತನಗೆರೆ ರಸ್ತೆ

Bettanagere link road is collapsing
Bettanagere link road is collapsing (nelamangala)
Published on

ಭಯದಲ್ಲೇ ವಾಹನ ಸವಾರರ ಓಡಾಟ

ಮನವಿಗೆ ಸ್ಪಂದಿಸದ ಅಧಿಕಾರಿಗಳು, ಜನಪ್ರತಿನಿಧಿಗಳು

ಜಿ.ಕೆ.ಸುಗ್ಗರಾಜು ನೆಲಮಂಗಲ
ನಗರದ ಹಿಪ್ಪೆ ಆಂಜನೇಯ ಬಡಾವಣೆಯಿಂದ ಬೆಂಗಳೂರು ಉತ್ತರ ತಾಲೂಕಿನ ಬೆತ್ತನಗೆರೆ ಸಂಪರ್ಕ ರಸ್ತೆ ಕುಸಿಯುವ ಹಂತ ತಲುಪಿದ್ದು, ಈ ಮಾರ್ಗದಲ್ಲಿ ಸಂಚರಿಸುವವರು ಭಯದಲ್ಲೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆತ್ತನಗೆರೆಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದ ಚರ್ಚ್ ಮುಂಭಾಗದ ಬಳಿ ರಾಜಕಾಲುವೆಗೆ ಹೊಂದಿಕೊಂಡಂತೆ ಇರುವ ರಸ್ತೆ ತಿಂಗಳ ಹಿಂದೆ ಸುರಿದ ಮಳೆಯಿಂದಾಗಿ ಅರ್ಧ ಭಾಗ ಕುಸಿದಿದೆ. ಪಕ್ಕದಲ್ಲೇ ರಾಜಕಾಲುವೆಯಲ್ಲಿ ನೀರು ನಿತ್ಯವೂ ಹರಿಯುವುದರಿಂದ ಮತ್ತಷ್ಟು ರಸ್ತೆ ಕುಸಿಯುವಂತಾಗಿದೆ. ಆದರೂ ಇದೇ ಮಾರ್ಗದಲ್ಲಿ ವಾಹನಗಳು ಸಂಚರಿಸುವ ಅನಿವಾರ್ಯತೆ ಇದೆ. ಅಪರಿಚಿತರು ಈ ಭಾಗದಲ್ಲಿ ವೇಗವಾಗಿ ವಾಹನ ಚಲಾಯಿಸಿಕೊಂಡು ಬಂದರೆ ಅಪಘಾತ ಗ್ಯಾರಂಟಿ ಎಂಬ ಸ್ಥಿತಿ ಇದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗದಿರುವುದು ನಾಗರಿಕರ ಬೇಸರಕ್ಕೆ ಕಾರಣವಾಗಿದೆ.

ಭಯದಲ್ಲಿ ಸಂಚಾರ: ನಗರದ ವಿವಿಧ ಬಡಾವಣೆ ತ್ಯಾಜ್ಯ ರಾಜಕಾಲುವೆಯಲ್ಲಿ ಹರಿಯುತ್ತಿದೆ. ಇದರಿಂದ ಹಿಪ್ಪೆ ಆಂಜನೇಯ ಬಡಾವಣೆಯಿಂದ ಬೆತ್ತನಗೆರೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ರಸ್ತೆ ಕುಸಿಯುತ್ತಿದ್ದು, ನೀರಿನ ಹರಿವು ಹೆಚ್ಚಿದಂತೆ ರಸ್ತೆಯೂ ಕುಸಿಯುವುದು ಹೆಚ್ಚುತ್ತಿದೆ. ಆದರೂ ಇದೇ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತಿವೆ. ಮಳೆಯ ಸಂದರ್ಭದಲ್ಲಿ ನೀರಿನ ಹರಿವು ಹೆಚ್ಚಾದರೆ ಅನಾಹುತ ಸಂಭವ ಹೆಚ್ಚಿದೆ. ಇನ್ನಾದರೂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.

ಅನುದಾನ ಹಿಂಪಡೆದ ಸರ್ಕಾರ ಕಳೆದ ಮಳೆಗಾಲದ ಸಂದರ್ಭದಲ್ಲಿ ನಗರದ ತಗ್ಗು ಪ್ರದೇಶ ಹಾಗೂ ರಾಜಕಾಲುವೆ ಹಾದುಹೋಗಿರುವ ಇಕ್ಕೆಲಗಳಲ್ಲಿನ ವಸತಿ ಬಡಾವಣೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಬೆತ್ತನಗೆರೆ ರಸ್ತೆ, ವಾಜರಹಳ್ಳಿ ರಸ್ತೆ, ಭಕ್ತನಪಾಳ್ಯ ರಸ್ತೆ, ಜನಪ್ರಿಯ ಅಪಾರ್ಟ್ ಮೆಂಟ್ ಬಳಿ ಸೇತುವೆ ನಿರ್ಮಾಣಕ್ಕಾಗಿ 5 ಕೋಟಿ ರೂ. ಅನುದಾನ ತಂದಿದ್ದರು. ಆದರೆ ನಗರಸಭೆ ಅಧಿಕಾರಿಗಳು ಸಕಾಲಕ್ಕೆ ಕ್ರಿಯಾಯೋಜನೆ ತಯಾರಿಸಿದ ಜತೆಗೆ ಇದರ ನಡುವೆ ಚುನಾವಣೆ ನಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 5 ಕೋಟಿ ಅನುದಾನವನ್ನು ಹಿಂಪಡೆದಿರುವುದರಿಂದ ಸಮಸ್ಯೆಗೆ ಮುಕ್ತಿ ದೊರೆತಿಲ್ಲ ಎಂದು ಪುರಸಭೆ ನಾಮನಿರ್ದೇಶಿತ ಮಾಜಿ ಸದಸ್ಯ ಕಪಾಲಿವೆಂಕಟೇಶ್ ತಿಳಿಸಿದರು.
ಕೊರಕಲು ಬಿದ್ದ ಈ ರಸ್ತೆ ವಾಹನ ಪ್ರಯಾಣಿಕರಿಗೆ ಅಪಾಯ ತಂದೊಡ್ಡಿದೆ. ನಿತ್ಯ ಹೆಚ್ಚಿನ ಶಾಲಾ ವಾಹನಗಳು ಇದೇ ಮಾರ್ಗದಲ್ಲಿ ಸಂಚಾರ ಮಾಡುವುದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ನಗರಸಭೆ ಅಧಿಕಾರಿಗಳು ಹಲವುಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ತಕ್ಷಣ ರಸ್ತೆ ದುರಸ್ತಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕು. ಇಲ್ಲವಾದಲ್ಲಿ ನಗರಸಭೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.


ರಾಜಕಾಲುವೆಯ ಕಾಂಕ್ರಿಟೀಕರಣಕ್ಕೆ ನಗರೋತ್ಥಾನ ಯೋಜನೆಯಿಂದ 8 ತಿಂಗಳ ಹಿಂದೆಯೇ ಅನುದಾನ ಬಿಡುಗಡೆಯಾಗಿದೆ. ಗುತ್ತಿಗೆದಾರನ ನಿರ್ಲಕ್ಷ್ಯದಿಂದ ರಸ್ತೆ ಕುಸಿಯುತ್ತಿದೆ. ಜನಸಾಮಾನ್ಯರು ರಸ್ತೆ ದುರಸ್ತಿಗೆ ಮನವಿ ಮಾಡಿದ್ದು, ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ದಾಕ್ಷಾಯಿಣಿ ರವಿಕುಮಾರ್, ನಗರಸಭೆ ಸದಸ್ಯೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net