ತ್ಯಾಜ್ಯ ಎಸೆತ ಪತ್ತೆಗೆ ಕ್ಯಾಮರಾ : ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ಸಭೆಯಲ್ಲಿ ಸದಸ್ಯರ ಆಗ್ರಹ

New Project (1)
Published on

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ

ಸಾರ್ವಜನಿಕ ಸ್ಥಳ, ರಸ್ತೆ, ತೋಡು, ಹೊಳೆ ತೀರದಲ್ಲಿ ತ್ಯಾಜ್ಯ ಎಸೆಯುವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದಾಗಿ ಪರಿಸರ ಮಲಿನವಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲವೊಂದು ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ಬೆಟ್ಟಂಪಾಡಿ ಗ್ರಾಪಂ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.

ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷೆ ವಿದ್ಯಾಶ್ರೀ ಸರೋಳಿಕಾನ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.

ಎಷ್ಟೇ ಜಾಗೃತಿ ಮೂಡಿಸಿದರೂ ತಿಳಿವಳಿಕೆ ನೀಡಿದರೂ ಜನರು ಮಾತ್ರ ತ್ಯಾಜ್ಯಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕುವುದು ಕಡಿಮೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು, ಈ ನಿಟ್ಟಿನಲ್ಲಿ ಅಲ್ಲಲ್ಲಿ ಎಚ್ಚರಿಕೆ ಫಲಕ ಅಳವಡಿಸುವ ಬಗ್ಗೆ ಸಲಹೆ ನೀಡಿದರು. ಎಚ್ಚರಿಕೆ ಫಲಕ ಅಳವಡಿಸಿದರೂ ಅದನ್ನು ನಗಣ್ಯ ಮಾಡಿ ಅದರ ಕೆಳಗಡೆಯೇ ತ್ಯಾಜ್ಯ ಸುರಿಯಲಾಗುತ್ತಿದೆ ಎಂದು ಕೆಲವರು ದೂರಿದರು. ಅದಕ್ಕಿಂತ ತ್ಯಾಜ್ಯಗಳನ್ನು ಎಸೆಯುವರ ಪತ್ತೆಗೆ ಅಲ್ಲಲ್ಲಿ ಸಿ.ಸಿ ಕ್ಯಾಮರಾ ಅಳವಡಿಸುವುದು ಸೂಕ್ತ. ತ್ಯಾಜ್ಯ ಎಸೆಯುವವರನ್ನು ಪತ್ತೆ ಮಾಡಿ ದೂರು ದಾಖಲಿಸಿ, ದಂಡ ವಿಧಿಸಿದರೆ ಮಾತ್ರ ಜನರಿಗೆ ಬುದ್ದಿ ಬರುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಪಂಚಾಯಿತಿ ಸದಸ್ಯರಾದ ಮಹಾಲಿಂಗ ನಾಯ್ಕ, ನವೀನ್‌ಕುಮಾರ್ ರೈ ಬೆಲ್ಯಡ್ಕ, ಚಂದ್ರಶೇಖರ್ ರೈ ಬಾಲ್ಯೊಟ್ಟು, ಲಲಿತಾ ಚಿದಾನಂದ, ಸುಮಲತಾ, ಲಲಿತಾ, ರಮ್ಯಾ, ಪವಿತ್ರಾ ಡಿ., ಪಾರ್ವತಿ ಎಂ., ಬೇಬಿ, ಮೊಯ್ದುಕುಂಞಿ, ಗಂಗಾಧರ ಗೌಡ, ಉಮಾವತಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಪ್ರಭಾರ ಕಾರ್ಯದರ್ಶಿ ಶಿವರಾಮ ಮೂಲ್ಯ ಸುತ್ತೋಲೆಗಳನ್ನು ಸಭೆಯ ಮುಂದಿಟ್ಟರು. ಪಿಡಿಒ ಸೌಮ್ಯಾ ಎಸ್.ಆರ್. ವಂದಿಸಿದರು.

ಕಸ ಸಂಗ್ರಹ ಇನ್ನೂ ಪ್ರಾರಂಭವಾಗಿಲ್ಲ

ಸ್ವಚ್ಛತಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿಲ್ಲ. ಕಸ ಸಂಗ್ರಹಕ್ಕೆ ಮನೆ ಮನೆ ಭೇಟಿ ಇನ್ನೂ ಪ್ರಾರಂಭವಾಗಿಲ್ಲ ಎಂದು ಉಪಾಧ್ಯಕ್ಷ ಮಹೇಶ್ ಹೇಳಿದರು. ಸಂಜೀವಿನಿ ಒಕ್ಕೂಟದ ಇಬ್ಬರು ರಜೆಯಲ್ಲಿರುವುದರಿಂದ ಮನೆ ಮನೆ ಭೇಟಿ ಆಗಿಲ್ಲ. ತಕ್ಷಣ ಈ ಕೆಲಸ ಕೈಗೆತ್ತಿಗೊಳ್ಳಲಾಗುವುದು ಎಂದು ಸಂಜೀವಿನಿ ಒಕ್ಕೂಟದ ಚೈತ್ರಾ ಮತ್ತು ಲೋಲಾಕ್ಷಿ ಉತ್ತರಿಸಿದರು.

ರಸ್ತೆ ದುರಸ್ತಿಗೆ ಆಗ್ರಹ

ಬೆಟ್ಟಂಪಾಡಿಯಿಂದ ಕೈಕಾರದ ತನಕ ಲೋಕೋಪಯೋಗಿ ಇಲಾಖೆ ರಸ್ತೆಯಲ್ಲಿ ಹೊಂಡ-ಗುಂಡಿಗಳು ನಿರ್ಮಾಣವಾಗಿ ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ. ಹಿಂದೊಮ್ಮೆ ರಸ್ತೆ ದುರಸ್ತಿಗಾಗಿ ಒತ್ತಾಯಿಸಲಾಗಿದ್ದರೂ ಇಲಾಖೆಯವರು ಇನ್ನೂ ಕ್ರಮ ಕೈಗೊಂಡಿಲ್ಲ. ತಕ್ಷಣ ರಸ್ತೆ ದುರಸ್ತಿಗೊಳಿಸಬೇಕು ಎಂದು ಸದಸ್ಯ ಪ್ರಕಾಶ್ ರೈ ಬೈಲಾಡಿ ಮತ್ತಿತರರು ಆಗ್ರಹಿಸಿದರು. ಉಪ್ಪಳಿಗೆ ಅಂಗನವಾಡಿ ಕೇಂದ್ರಕ್ಕೆ ನೀರಿನ ವ್ಯವಸ್ಥೆ ಸರಿಪಡಿಸಿಕೊಡುವಂತೆ ಸಲ್ಲಿಸಲಾಗಿದ್ದ ಮನವಿ ಕುರಿತು ಚರ್ಚಿಸಿ, ಹತ್ತಿರದ ಪ್ರೌಢಶಾಲೆಯಿಂದ ನೀರಿನ ವ್ಯವಸ್ಥೆ ಮಾಡಿಕೊಡುವುದೆಂದು ತೀರ್ಮಾನಿಸಲಾಯಿತು. ಗೋಳಿಪದವು ಎಂಬಲ್ಲಿ ತಲೆದೋರಿರುವ ನೀರಿನ ಅವ್ಯವಸ್ಥೆ ಕುರಿತು ಚರ್ಚಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net