ನೃತ್ಯಾಭ್ಯಾಸ ಮಾಡುತ್ತಿದ್ದಾಗ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

24 btm vimala school01
Published on

ಬೇತಮಂಗಲ: ಶಾಲಾ ವಾರ್ಷಿಕೋತ್ಸವಕ್ಕಾಗಿ ಶುಕ್ರವಾರ ನೃತ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಕುಸಿದು ಬಿದ್ದು ಮೃತಪಟ್ಟಿರುವುದು ಟಿ.ಗೊಲ್ಲಹಳ್ಳಿಯ ವಿಮಲಾ ಹೃದಯ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಗುರುವಾರ ನಡೆದಿದೆ.

ಕೆಜಿಎಫ್ ಠಾಣೆ ಪೇದೆ ಅಲ್ಲಿಕುಂಟೆ ಗ್ರಾಮದ ಚಂದ್ರಕುಮಾರ್ ಅವರ ಪುತ್ರಿ ಪೂಜಿತಾ (15) ಮೃತೆ.

ಜ.25 ಶನಿವಾರ ಶಾಲಾ ವಾರ್ಷಿಕೋತ್ಸವವು ನಿಗದಿಯಾಗಿತ್ತು. ಅದಕ್ಕಾಗಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪೂಜಿತಾ ತನ್ನ 6 ಸಹಪಾಠಿಗಳೊಂದಿಗೆ ಗುಂಪು ನೃತ್ಯ ಅಭ್ಯಾಸ ನಡೆಸುತ್ತಿದ್ದಾಗ ಕುಸಿದು ಬಿದ್ದಿದ್ದಾಳೆ. ತಕ್ಷಣ ಸಹಪಾಠಿಗಳು ಶಾಲಾ ಮುಖ್ಯಸ್ಥರಿಗೆ ತಿಳಿಸಿ ಬೇತಮಂಗಲ ಆಸ್ಪತ್ರೆಗೆ ಸಾಗಿಸಿದ್ದಾರೆ. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಖಾಸಗಿ ಆಸ್ಪತ್ರೆ ಸೂಚಿಸಿದ್ದಾರೆ. ಅಲ್ಲಿಗೆ ಕರೆದೊಯ್ಯುವ ದಾರಿ ಮಧ್ಯೆ ಆಂಬುಲೆನ್ಸ್‌ನಲ್ಲಿ ಕೊನೆಯುಸಿರೆಳೆದಿದ್ದಾಳೆ.

ಶಿಕ್ಷಕನ ನಿರ್ಲಕ್ಷ್ಯಕ್ಕೆ ಆಕ್ರೋಶ: ವಿದ್ಯಾರ್ಥಿಗಳ ನೃತ್ಯ ತಾಲೀಮಿನ ದೃಶ್ಯ ಕೊಠಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇತರ ಅನುಮಾನಗಳಿಂದ ಆಡಳಿತ ಮಂಡಳಿ ಆರೋಪ ಮುಕ್ತವಾಗಿದೆಯಾದರೂ ರಿಹರ್ಸಲ್ ಉಸ್ತುವಾರಿ ವಹಿಸಿದ್ದ ಶಿಕ್ಷಕ ವಾಸುದೇವ್ ನಿರ್ಲಕ್ಷ್ಯ ಸಾಬೀತಾಗಿದೆ. ಸುಮಾರು 5 ನಿಮಿಷದ ಕ್ಯಾಮರಾ ಫೋಟೇಜ್‌ನಲ್ಲಿ ಡ್ಯಾನ್ಸ್ ಕಲಿಸಬೇಕಾದ ಶಿಕ್ಷಕ ಮೂಲೆಯಲ್ಲಿ ಕುಳಿತು ಮೊಬೈಲ್ ವೀಕ್ಷಿಸುತ್ತಿದ್ದ, ಪೂಜಿತಾ ಕುಸಿದು ಬಿದ್ದಾಗ ಸಹಪಾಠಿಗಳು ಕೂಗಿಕೊಂಡರೂ ಶಿಕ್ಷಕ ಪ್ರಥಮ ಚಿಕಿತ್ಸೆಗೆ ಮುಂದಾಗಲಿಲ್ಲ. ಇದರಿಂದ ವಿದ್ಯಾರ್ಥಿಗಳು ಇತರ ಶಿಕ್ಷಕಿಯರನ್ನು ಸ್ಥಳಕ್ಕೆ ಕರೆತಂದಿದ್ದಾರೆ. ಬಳಿಕ ಶಿಕ್ಷಕ ಬಂದಿರುವ ದೃಶ್ಯ ಸೆರೆಯಾಗಿದೆ. ಇದು ಪಾಲಕರ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net