ಆಂಜನೇಯನಿಗೆ ವೀಳ್ಯದೆಲೆ ಹಾರ ಅರ್ಪಣೆ

bhr rama
ಬಾಳೆಹೊನ್ನೂರಿನ ಆಂಜನೇಯ ದೇವಸ್ಥಾನದಲ್ಲಿ ದೇವರಿಗೆ ವೀಳ್ಯದೆಲೆ ಅಂಲಕಾರ.
Published on

ಬಾಳೆಹೊನ್ನೂರು: ಹೋಬಳಿಯ ವಿವಿಧೆಡೆ ಬುಧವಾರ ಸಂಭ್ರಮದಿಂದ ಶ್ರೀರಾಮ ನವಮಿ ಆಚರಿಸಲಾಯಿತು. ಪಟ್ಟಣದ ಕೆಳಗಿನ ಪೇಟೆ ಆಂಜನೇಯ ದೇವಸ್ಥಾನದಲ್ಲಿ ಶ್ರೀರಾಮ ಸಮೇತ ಆಂಜನೇಯಸ್ವಾಮಿಗೆ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಿ ಪೂಜೆ ನೆರವೇರಿಸಿ ಭಕ್ತರಿಗೆ ತೀರ್ಥ ಪ್ರಸಾದ ಹಾಗೂ ಪಾನಕ ವಿತರಿಸಲಾಯಿತು.

ಪವಮಾನಾಭಿಷೇಕ, ವಾಯುಸ್ತುತಿ, ತುಳಸಿ ಅರ್ಚನೆ, ಅಲಂಕಾರ ನೆರವೇರಿಸಿ ಮಹಾ ಮಂಗಳಾರತಿ ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಸಂಜೆ ಪಟ್ಟಣದಲ್ಲಿ ಶ್ರೀರಾಮ ಹಾಗೂ ಆಂಜನೇಯ ಸ್ವಾಮಿ ಉತ್ಸವಮೂರ್ತಿಯನ್ನು ಸುಂದರವಾಗಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ನಡೆಸಿದರು. ಭಕ್ತರೊಬ್ಬರು ಶ್ರೀರಾಮ ಆಂಜನೇಯ ವಿಗ್ರಹಕ್ಕೆ ಶ್ರೀರಾಮ ಎಂದು ಬರೆದ ವೀಳ್ಯದೆಲೆ ಹಾರ ಅರ್ಪಿಸಿದರು.
ಸಿಆರ್‌ಎಸ್ ಭಾರತೀಯ ಕಾಫಿ ಸಂಶೋಧನಾ ಕೇಂದ್ರದ ಆವರಣದ ಶ್ರೀ ಕೋದಂಡ ರಾಮಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಶ್ರೀರಾಮ ವಿಗ್ರಹಕ್ಕೆ ಅಭಿಷೇಕ, ಅರ್ಚನೆ, ಅಲಂಕಾರ ಮಾಡಿ ಆರಾಧಿಸಲಾಯಿತು. ಭಕ್ತರಿಗೆ ಪಾನಕ, ಕೋಸಂಬರಿ, ಅನ್ನ ಸಂತರ್ಪಣೆ ಮಾಡಲಾಯಿತು.
ವಾಟುಕೊಡಿಗೆ ಕೋದಂಡರಾಮ ದೇವಸ್ಥಾನ, ಮಾಗುಂಡಿ ಶ್ರೀರಾಮ ದೇವಸ್ಥಾನದಲ್ಲೂ ವಿಶೇಷ ಪೂಜೆ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net