ಸರ್ಕಾರಿ ಆಸ್ಪತ್ರೆ ಅಂದ್ರೆ ತಿರಸ್ಕಾರ ಮನೋಭಾವ ಬೇಡ

Betamangala Hospital
Published on

ಬೇತಮಂಗಲ: ಹೆಣ್ಣು ಮಕ್ಕಳು ಗರ್ಭಿಣಿಯಾದ 7 ಅಥವಾ 9 ತಿಂಗಳಲ್ಲಿ ತವರು ಮನೆಯವರು ಸಂಪ್ರದಾಯದಂತೆ ಸೀಮಂತ ಕಾರ್ಯ ನಡೆಸುವ ಮೂಲಕ ಉಡುಗೊರೆ ಕೊಡುತ್ತಾರೆ, ಆದರೆ ಬೇತಮಂಗಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯ ನಡೆಸುವ ಮೂಲಕ ವಿಶಿಷ್ಟ ಸಂಪ್ರದಾಯಕ್ಕೆ ನಾಂದಿ ಹಾಡಿತು.

ಸಮುದಾಯ ಆರೋಗ್ಯ ಕೇಂದ್ರ ಬೇತಮಂಗಲ, ಗ್ರಾಪಂ ಹಾಗೂ ಇಶ್ರೆ ಸೇವಾ ಸಂಸ್ಥೆ ಆಶ್ರಯದಲ್ಲಿ ಏರ್ಪಡಿಸಿದ್ದ ಸೀಮಂತ ಕಾರ್ಯಕ್ರಮ ಹಬ್ಬದ ವಾತಾವರಣ ಉಂಟುಮಾಡಿತು.

ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಸಂಸ್ಕೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಆಸ್ಪತ್ರೆ ಎಂದರೆ ಭಯ, ಅಸಡ್ಡೆ ಅಥವಾ ತಿರಸ್ಕಾರ ಮನೋಭಾವದಿಂದ ನೋಡಬಾರದು. ನಾವು ಕೂಡ ನಿಮ್ಮ ತವರು ಮನೆಯವರು ಎಂದು ನಿಮ್ಮಲ್ಲಿ ಆಶಾಭಾವನೆ ಹುಟ್ಟಿಸುವ ಉದ್ದೇಶದಿಂದ ಆಸ್ಪತ್ರೆಯಲ್ಲೇ ಸೀಮಂತ ಕಾರ್ಯ ಏರ್ಪಡಿಸಿದ್ದೇವೆ ಎಂದರು.

ಕಾರ್ಯಕ್ರಮಕ್ಕೆ ಇಶ್ರೆ ಸೇವಾ ಸಂಸ್ಥೆ, ಗ್ರಾಪಂ ಆಡಳಿತ ಮಂಡಳಿ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸಹಕಾರ ನೀಡಿದ್ದಾರೆ. ಹೀಗೆ ಸಹಕಾರ ಸಿಕ್ಕಿದ್ದಲ್ಲಿ ಮೂರು ತಿಂಗಳಿಗೆ ಒಮ್ಮೆ ಸೀಮಂತ ಕಾರ್ಯಕ್ರಮ ನಡೆಸಲು ಚಿಂತನೆ ಮಾಡುತ್ತೇವೆ ಎಂದರು.

ಕೆ.ಆರ್.ಪುರ ವ್ಯಾಪ್ತಿಯ ತಾಲೂಕು ವೈದ್ಯಾಧಿಕಾರಿ ರಘುನಂದನ್ ಮಾತನಾಡಿ, ಸರ್ಕಾರದ ಆಸ್ಪತ್ರೆಗೆ ಹೆರಿಗೆ ಮಾಡಿಸಿಕೊಳ್ಳಲು ಗರ್ಭಿಣಿಯರು ಹೆದರುತ್ತಿದ್ದ ಹಿನ್ನೆಲೆಯಲ್ಲಿ ನಾವು ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಸೀಮಂತ ಕಾರ್ಯಕ್ರಮ ನಡೆಸುವ ಮೂಲಕ ಧೈರ್ಯ ತುಂಬುತ್ತಿದ್ದೇವೆ. ಎಲ್ಲೆಡೆ ಈ ಯೋಜನೆ ಯಶಸ್ವಿಯಾಗಿದ್ದು, ಬೇತಮಂಗಲದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರು ಹೆರಿಗೆ ಮಾಡಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.

ಆರ್.ಕೆ.ಸಮಿತಿಯ ಅಧ್ಯಕ್ಷ ಹಾಗೂ ಗ್ರಾಪಂ ಅಧ್ಯಕ್ಷ ವಿನು ಕಾರ್ತಿಕ್ ಮಾತನಾಡಿ, ಆಸ್ಪತ್ರೆ ನಮ್ಮ ಆಸ್ತಿ, ನಮ್ಮ ಹೆಮ್ಮೆ ಎನ್ನುವ ರೀತಿಯಲ್ಲಿ ವೈದ್ಯಾಧಿಕಾರಿಗಳು ಸೇರಿ ಎಲ್ಲ ಸಿಬ್ಬಂದಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಎಲ್.ಎಚ್.ವಿ. ದೀಪ್ತಿ ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಹೆರಿಗೆಗಳು ಆಗುತ್ತಿದ್ದು, ಎಲ್ಲ ರೀತಿಯ ಕಾಯಿಲೆಗೂ ನುರಿತ ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದಾಗಿ ಬೇರೆ ಕಡೆಗಳಿಂದಲೂ ರೋಗಿಗಳು ನಮ್ಮ ಆಸ್ಪತ್ರೆಗೆ ಬರುತ್ತಿದ್ದಾರೆ ಇದು ನಮ್ಮ ವ್ಯದ್ಯರು ಮತ್ತು ಸಿಬ್ಬಂದಿಗೆ ಹೆಮ್ಮೆಯ ವಿಷಯವಾಗಿದ್ದು, ಮತ್ತಷ್ಟು ಉತ್ತಮ ಸೇವೆ ನೀಡುವುದೇ ನಮ್ಮ ಉದ್ದೇಶವಾಗಿದೆ ಎಂದರು.

ಇಶ್ರೆ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಸೀಮಂತ ಮಾಡಿಸಿಕೊಂಡ ಗರ್ಭಿಣಿಯರಿಗೆ ಸೀರೆ, ಕುಪ್ಪಸ ಮತ್ತು ಪೋಷಕಾಂಶಗಳಿರುವ ಆಹಾರ ಪದಾರ್ಥಗಳ ಕಿಟ್‌ಅನ್ನು ಉಡುಗೊರೆಯಾಗಿ ನೀಡಲಾಯಿತು. ಪಂಚಾಯಿತಿ ವತಿಯಿಂದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ನೂರಕ್ಕೂ ಹೆಚ್ಚು ಮಂದಿ ಗರ್ಭಿಣಿಯರು ಭಾಗವಹಿಸಿದ್ದರು. ಗ್ರಾಪಂ ಮಾಜಿ ಅಧ್ಯಕ್ಷ ಇನಾಯತ್‌ವುಲ್ಲಾ ಶರೀಫ್, ಪಿಡಿಒ ಮಂಜುನಾಥ್, ಇಶ್ರೆ ಸಂಸ್ಥೆಯ ಅಧ್ಯಕ್ಷ ಮುನಿರಾಜು, ಸುನಿತಾ, ಶ್ವೇತಾ, ವೈದ್ಯರಾದ ವಿನಯ್ಕುಮಾರ್, ರಾಜಾರಾಂ, ಮಂಪ್ರೀತ್ ಕೌರ್, ಆರೋಗ್ಯ ನಿರೀಕ್ಷಕ ತಾಯಲೂರು ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net