

ಬೇತಮಂಗಲ: ಭಾನುವಾರ ಗೋಚರಿಸಿದ ಸೂರ್ಯಗ್ರಹಣದಿಂದ ಗ್ರಾಮಗಳಿಗೆ ಯಾವುದೇ ಕೇಡು ಉಂಟಾಗಬಾರದೆಂದು ಅಂಕತಟ್ಟಹಳ್ಳಿ ಮತ್ತು ನಲ್ಲೂರು ಗ್ರಾಮಗಳಲ್ಲಿ ಶಾಂತಿ ಬಲಿ ಮಾಡಲಾಯಿತು.
ಅಂಕತಟ್ಟಹಳ್ಳಿ ಮತ್ತು ನಲ್ಲೂರು ಗ್ರಾಮ ಅಕ್ಕಪಕ್ಕದಲ್ಲಿವೆ. ಎರಡೂ ಗ್ರಾಮಗಳಲ್ಲಿ ನಡೆಯುವ ಪೂಜೆ ಪುನಸ್ಕಾರ ಸೇರಿ ಹಿಂದಿನ ಕಾಲದಿಂದ ನಡೆಸಿಕೊಂಡು ಬರುತ್ತಿದ್ದ ಸಂಪ್ರದಾಯವನ್ನು ಇಂದಿಗೂ ಆಚರಣೆ ಮಾಡುತ್ತಿರುವುದು ವಿಶೇಷ.
ಭಾನುವಾರ ಗ್ರಹಣಕಾಲ ಪ್ರಾರಂಭವಾದ ನಂತರ ಗ್ರಾಮದ ಪ್ರಮುಖ ರಸ್ತೆ ಮಧ್ಯಭಾಗದಲ್ಲಿ ಶಾಂತಿ ಬಲಿಪೂಜೆ ನಡೆಸಲಾಯಿತು. ಮೊದಲಿಗೆ ಅನ್ನದ ಪೂಜೆ ಮಾಡಿದ ನಂತರ ಕುರಿಗೆ ಪೂಜೆ ಸಲ್ಲಿಸಿ ಬಲಿ ನೀಡಲಾಯಿತು.
ವ್ಯಕ್ತಿ ಬೇವಿನ ಸೊಪ್ಪನ್ನು ರಕ್ತದಲ್ಲಿ ಅದ್ದಿಕೊಂಡು ಗ್ರಾಮದ ಎಲ್ಲ ಮನೆ ಬಾಗಿಲಿನ ಬಳಿ ತೆರಳಿ ಹೇ ಬಲಿ ಎನ್ನುತ್ತಾ ರಕ್ತದ ಕಲೆ ಇರುವ ಬೇವಿನ ಸೊಪ್ಪಿನ ಎಲೆ ಚೆಲ್ಲಿ ಬರುತ್ತಾರೆ. ಇದರಿಂದ ಗ್ರಾಮಕ್ಕೆ ಗ್ರಹಣ ದೋಷ ಇರುವುದಿಲ್ಲ ಎನ್ನುವುದು ಗ್ರಾಮಸ್ಥರ ನಂಬಿಕೆಯಾಗಿದೆ.
ಅಂಕತಟ್ಟಹಳ್ಳಿಯಲ್ಲಿ ಇಡೀ ಗ್ರಾಮದ ಎಲ್ಲರೂ ಸೇರಿ ಒಟ್ಟಾಗಿ ಇದನ್ನು ಆಚರಣೆ ಮಾಡುತ್ತಾರೆ. ಆದರೆ ನಲ್ಲೂರು ಗ್ರಾಮದಲ್ಲಿ ಪ್ರತಿ ಗ್ರಹಣಕ್ಕೂ ಒಂದೊಂದು ವಂಶಸ್ಥರು ಅಥವಾ ಆ ಕುಟುಂಬದವರು ಉಸ್ತುವಾರಿ ವಹಿಸುತ್ತಾರೆ. ಗ್ರಾಮಸ್ಥರೆಲ್ಲ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.
ಗ್ರಾಮದ ಪ್ರಮುಖ ಮುಖಂಡರಾದ ಅ.ಮುಲಕ್ಷ್ಮೀನಾರಾಯಣ್, ಪ್ರಭಾಕರ್, ಸಂಪತ್‌ಕುಮಾರ್, ಅಮರ್‌ನಾಥ್, ನಂಜುಂಡಗೌಡ, ಶಿವಣ್ಣ, ರಾಜಣ್ಣ, ಕೃಷ್ಣೇಗೌಡ, ರವಿಕುಮಾರ್, ಶಶಿ ಸೇರಿಭಾಗವಹಿಸಿದ್ದರು.