

ಬೆಂಗಳೂರು: ಹೃದಯಾಘಾತ ಹೊರತುಪಡಿಸಿ ಅತಿಹೆಚ್ಚು ಜನರ ಸಾವಿಗೆ ಕಾರಣವಾಗಿರುವ ಬಾಯಿ ಕ್ಯಾನ್ಸರ್ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಲು ಸೌತ್ ಏಷ್ಯನ್ ಸೊಸೈಟಿ ಆಫ್ ಓರಲ್ ಆಂಡ್ ಮ್ಯಾಕ್ಸಿಲ್ಲೋಫೇಸಿಯಲ್ ಇಂಪ್ಲಾಂಟಾಲಜಿ (ಸಾಸೊಮಿ) ಪಣ ತೊಟ್ಟಿದೆ.
ನಿಮ್ಹಾನ್ಸ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಭಾರತ-ಜಪಾನ್ ಅಂತಾರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಜಪಾನ್ ಜತೆ ಸಾಸೊಮಿ ಹಲವು ಒಪ್ಪಂದಗಳನ್ನು ಮಾಡಿಕೊಂಡಿದೆ. ಮಾರಣಾಂತಿಕ ಬಾಯಿ ಕಾನ್ಸರ್ ಅನ್ನು ಸುಧಾರಿತ ತಂತ್ರಜ್ಞಾನ ಮೂಲಕ ಹೇಗೆ ಗುಣಪಡಿಸಬಹುದು, ಅತ್ಯಾಧುನಿಕ ಚಿಕಿತ್ಸೆಗಳು ಏನೇನು ಹಾಗೂ ಸಂಶೋಧನೆ ನಡೆಸಿರುವ ಬಗ್ಗೆ ಸೇರಿ ಇತ್ಯಾದಿ ಮಹತ್ವದ ಅಂಶಗಳ ಬಗ್ಗೆ ಜಪಾನ್ನ 14 ವೈದ್ಯರು ಮಾತನಾಡಿದರು.
ಅಂತಾರಾಷ್ಟ್ರೀಯ ಆರೋಗ್ಯ ಪ್ರತಿಷ್ಠಾನ ಅಧ್ಯಕ್ಷ ಡಾ. ಕನಿಚಿ ಸೆಟೊ ಮಾತನಾಡಿ, ಭಾರತಕ್ಕೆ ಹೋಲಿಸಿದರೆ ಜಪಾನ್ ದೇಶದಲ್ಲಿ ಬಾಯಿ ಕ್ಯಾನ್ಸರ್ನಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಕೇವಲ
ಶೇ.1 ಇದೆ. ಹೊಸ ತಂತ್ರಜ್ಞಾನದ ಮೂಲಕ ಈ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟುತ್ತಿದ್ದೇವೆ. ಬೆಂಗಳೂರಲ್ಲಿ ನಡೆದಿರುವ ಈ ವಿಚಾರ ಸಂಕಿರಣದಿಂದ ನಮ್ಮಲ್ಲಿರುವ ಆಧುನಿಕ ಚಿಕಿತ್ಸೆ ಮತ್ತು ತಂತ್ರಜ್ಞಾನಗಳನ್ನು ಭಾರತದ ವೈದ್ಯರ ಜತೆ ವಿನಿಮಯ ಮಾಡಿ ಕೊಳ್ಳಲು ಸಹಕಾರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ತಂಬಾಕು ಸೇವನೆ ಕಾರಣ: ಆರ್.ವಿ. ಡೆಂಟಲ್ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ. ಕೆ.ಎಸ್. ನಾಗೇಶ್ ಮಾತನಾಡಿ, ದೇಶದಲ್ಲಿ ಶೇ.40 ಮಂದಿ ಬಾಯಿ ಕ್ಯಾನ್ಸರ್ಗೆ ತುತ್ತಾಗುತ್ತಿದ್ದಾರೆ. ತಂಬಾಕು ಸೇವನೆಯಿಂದ ಈ ಕಾಯಿಲೆ ಉಂಟಾಗುತ್ತದೆ. ಪ್ರಥಮ ಹಂತದಲ್ಲೇ ಈ ರೋಗವನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಗುಣಪಡಿಸಬಹುದು. ಚಿಕ್ಕವಯಸ್ಸಿನ ಮಕ್ಕಳು ಹೆಚ್ಚಾಗಿ ತಂಬಾಕು ದುಶ್ಚಟಗಳಿಗೆ ಬಲಿಯಾಗುತ್ತಿದ್ದರೆ. ಆದ್ದರಿಂದ, ಈ ರೋಗದ ಬಗ್ಗೆ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಜನ ಸಾಮಾನ್ಯರಿಗೆ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದರು.
ಜಪಾನ್ನಲ್ಲಿದೆ ಆಧುನಿಕ ಚಿಕಿತ್ಸೆ
ಭಾರತದಲ್ಲಿ ಬಾಯಿ ಕ್ಯಾನ್ಸರ್ಗೆ ಆಧುನಿಕ ಚಿಕಿತ್ಸೆ ವಿಧಾನಗಳು ಕಡಿಮೆ ಇದೆ. ಕಿಮಿಯೋಥೆರಪಿ, ಶಸ್ತ್ರಚಿಕಿತ್ಸೆ ಮತ್ತು ಕ್ಷ ಕಿರಣ ಸೇರಿ ವಿವಿಧ ಬಗೆಯ ಔಷಧಗಳ ಮೂಲಕ ಬಾಯಿ ಕ್ಯಾನ್ಸರ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಪಾನ್ನಲ್ಲಿ ಆಧುನಿಕ ಶಸ್ತ್ರಚಿಕಿತ್ಸೆ ವಿಧಾನಗಳಿದ್ದು, ಇಮ್ಯೂನ್ ಥೆರಪಿ, ಪ್ರೋಟಾನ್ ಥೆರಪಿ, ನ್ಯೂಟ್ರಾನ್ ಥೆರಪಿ ಸೇರಿ ಹೊಸ ತಂತ್ರಜ್ಞಾನದ ಮೂಲಕ ಈ ರೋಗಕ್ಕೆ ಔಷಧ ನೀಡಲಾಗುತ್ತಿದೆ. ಆ ಹೊಸ ಚಿಕಿತ್ಸಾ ವಿಧಾನಗಳನ್ನು ಭಾರತದಲ್ಲಿ ಅನುಷ್ಠಾನಗೊಳಿಸಲು ಜಪಾನ್ ವೈದ್ಯರ ಜತೆ ಮಾತುಕತೆ ನಡೆಸಲಾಗಿದೆ ಎಂದು ನಾಗೇಶ್ ತಿಳಿಸಿದರು. ಜಪಾನ್ ಅಕಾಡೆಮಿ ಆಫ್ ಮ್ಯಾಕ್ಸಿಲ್ಲೋಫೇಸಿಯಲ್ ಇಂಪ್ಲಾಂಟ್ಸ್ ಅಧ್ಯಕ್ಷ ಡಾ. ಜೂನ್ ಶಿಮದ, ಜಪಾನ್ ಅಕಾಡೆಮಿ ಆಫ್ ಮ್ಯಾಕ್ಸಿಲ್ಲೋಫೇಸಿಯಲ್ ಇಂಪ್ಲಾಂಟ್ಸ್ ಸಂಯೋಜಕ ಡಾ. ಟಕೊಒ ವಾತನಾಬೆ, ಸಾಸೊಮಿ ಉಪಾಧ್ಯಕ್ಷ ಡಾ. ಜಿ.ಎನ್. ಅನಂದಕೃಷ್ಣ ಹಾಗೂ ಡಾ. ಶ್ರೀಲತಾ ಭಾರ್ಗವ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ರಾಜ್ಯಗಳ 400ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ವರ್ಷಕ್ಕೆ 1 ಲಕ್ಷ ಜನಕ್ಕೆ ಬಾಯಿ ಕ್ಯಾನ್ಸರ್
ಅಮೆರಿಕ, ಜಪಾನ್, ಚೀನಾಗಳಿಗೆ ಹೋಲಿಸಿದರೆ ಭಾರತದಲ್ಲಿ ಹೆಚ್ಚು ಜನರು ಬಾಯಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಪ್ರತಿವರ್ಷ ಹೊಸದಾಗಿ 1 ಲಕ್ಷ ರೋಗಿಗಳು ಸೃಷ್ಟಿಯಾಗುತ್ತಿದ್ದಾರೆ. ಹೀಗಾಗಿ, ದೇಶವನ್ನು ಬಾಯಿ ಕ್ಯಾನ್ಸರ್ವುುಕ್ತ ರಾಷ್ಟ್ರವನ್ನಾಗಿಸಲು ನಮ್ಮ ಸಂಸ್ಥೆ ಜಪಾನ್ ಜತೆ ಒಪ್ಪಂದ ಮಾಡಿಕೊಂಡಿದೆ. ಅಲ್ಲದೆ, ತಂಬಾಕು ಸೇವನೆಯಿಂದ ಆಗುವ ಅನಾಹುತಗಳ ಬಗ್ಗೆ ಯುವಜನತೆಗೆ ಅರಿವು ಮೂಡಿಸಲು ಸಹಭಾಗಿತ್ವ ವಹಿಸಲು ಸಿದ್ಧವಾಗಿದ್ದೇವೆ ಎಂದು ಸಾಸೊಮಿ ಅಧ್ಯಕ್ಷ ಡಾ. ಎಸ್. ಗಿರೀಶ್ ರಾವ್ ಹೇಳಿದರು.
ದಂತ ವೈದ್ಯಕೀಯ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಂಶೋಧಕರು ಹೊಸ ಚಿಕಿತ್ಸಾ ವಿಧಾನಗಳ ಬಗ್ಗೆ ಜಪಾನ್ನಲ್ಲಿ ಅಧ್ಯಯನ ನಡೆಸಲು ಹಾಗೂ ಆಧುನಿಕ ಚಿಕಿತ್ಸೆಗಳ ಬಗ್ಗೆ ಜಪಾನ್ ವೈದ್ಯರು ಇಲ್ಲಿಗೆ ಬಂದು ತಿಳಿಸಿಕೊಡುವ ಬಗ್ಗೆ ಮಾತುಕತೆ ನಡೆದಿದೆ. ಇದಕ್ಕೆ ಜಪಾನ್ ವೈದ್ಯರು ಒಪ್ಪಿದ್ದಾರೆ. | ಡಾ. ಎಸ್. ಗಿರೀಶ್ ರಾವ್ ಸಾಸೊಮಿ ಅಧ್ಯಕ್ಷ