

ಕಳಸ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಳಸ ಘಟಕ ವ್ಯಸನಮುಕ್ತ ಸಮಾಜಕ್ಕಾಗಿ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಸಿತು. ಗಾಂಧಿ ಜಯಂತಿ ಪ್ರಯುಕ್ತ ನಡೆದ ಜಾಥಾದಲ್ಲಿ ಭಾಗವಹಿಸಿದ್ದ ಜನರು ಮದ್ಯಪಾನ ಮತ್ತಿತರ ದುಶ್ಚಟಗಳ ವಿರುದ್ಧ ಘೋಷಣೆ ಕೂಗಿದರು. ಗಾಂಧಿ ವೇಷಧಾರಿ ಮೆರವಣಿಗೆಯಲ್ಲಿ ಗಮನ ಸೆಳೆದರು. ನವಜೀವನ ಸಮಿತಿ ಸದಸ್ಯರು ಮತ್ತು ಯೋಜನೆಯ ನೂರಾರು ಸದಸ್ಯರು, ಸಿಬ್ಬಂದಿ ಭಾಗವಹಿಸಿದ್ದರು.
ಮಹಾವೀರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಸುಜಯಾ ಸದಾನಂದ ಮಾತನಾಡಿ, ಜನಮಂಗಲ ಕಾರ್ಯಕ್ರಮದಲ್ಲಿ ಅನಾರೋಗ್ಯಪೀಡಿತರಿಗೆ ಧನಸಹಾಯ ನೀಡಲಾಗುತ್ತಿದೆ. ಊರಿನ 38 ಶ್ರದ್ಧಾಕೇಂದ್ರಗಳ ಸ್ವಚ್ಛತೆಯನ್ನು ವರ್ಷದಲ್ಲಿ ಎರಡು ಬಾರಿ ಕಾರ್ಯಕರ್ತರು ನಡೆಸುತ್ತಿದ್ದಾರೆ ಎಂದರು.
ಜನಜಾಗೃತಿ ವಿಭಾಗದ ಯೋಜನಾಧಿಕಾರಿ ನಾಗರಾಜ್ ಕುಲಾಲ್ ಮಾತನಾಡಿ, ಮದ್ಯವರ್ಜನ ಶಿಬಿರ ನಡೆಸಿ ಮದ್ಯ ವ್ಯಸನದಿಂದ ಮುಕ್ತರನ್ನಾಗಿಸಲಾಗುತ್ತಿದೆ ಎಂದರು.
ಶೌರ್ಯ ವಿಪತ್ತು ಘಟಕದ ಮಾಸ್ಟರ್ ಮಹೇಶ್ ಬಸರೀಕಲ್ಲು ಮಾತನಾಡಿ, ಶೌರ್ಯ ವಿಪತ್ತು ನಿರ್ವಹಣಾ ಘಟಕದಲ್ಲಿ 135 ಸದಸ್ಯರು ಇದ್ದು, ಅತಿವೃಷ್ಟಿ ಮತ್ತಿತರ ಅನೇಕ ತುರ್ತು ಸನ್ನಿವೇಶದಲ್ಲಿ ಶೌರ್ಯ ಕಾರ್ಯಕರ್ತರು ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಬ್ರಹ್ಮದೇವ, ಕಳಸ ತಹಸೀಲ್ದಾರ್ ಕೆ.ಎಸ್.ದಯಾನಂದ, ಕಳಸ ಗ್ರಾಪಂ ಅಧ್ಯಕ್ಷೆ ಉಷಾ ವಿಶ್ವನಾಥ್, ಯೋಜನಾಧಿಕಾರಿಗಳಾದ ನಾಗರಾಜ್, ಸುರೇಶ್, ಹರೀಶ್, ಮುಖಂಡರಾದ ಕೀರ್ತಿ ಜೈನ್, ಶ್ರೀಕಾಂತ್, ಮುರಳೀಧರ್, ಪ್ರಶಾಂತ್, ಮಹೇಶ್, ಅಜಿತ್ ಕುಲಾಲ್ ಭಾಗವಹಿಸಿದ್ದರು.