

ಮಂಡ್ಯ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನೆಹರು ಯುವ ಕೇಂದ್ರ ಕೊಡಮಾಡುವ 2021-22ನೇ ಸಾಲಿನ ಅತ್ಯುತ್ತಮ ಯುವ ಸಂಘ ಪ್ರಶಸ್ತಿಗೆ ತಾಲೂಕಿನ ಮಂಗಲ ಗ್ರಾಮದ ನೆಲದನಿ ಬಳಗ ಆಯ್ಕೆಯಾಗಿದೆ.
ನೆಲದನಿ ಬಳಗವು ದಶಕದಿಂದಲೂ ಜಿಲ್ಲಾದ್ಯಂತ ಸಮಾಜಮುಖಿ ಸೇವೆ ಮಾಡುತ್ತಾ ಬಂದಿದೆ. ರಕ್ತದಾನ ಶಿಬಿರ, ಕಲೆ, ಸಾಹಿತ್ಯ, ರಂಗ ಚಟುವಟಿಕೆ, ಗ್ರಾಮೀಣ ಕ್ರೀಡಾಕೂಟ ರಾಜ್ಯಮಟ್ಟದಲ್ಲಿ ಮನ್ನಣೆ ಪಡೆದಿದೆ. ನಾಟಿ ಕೋಳಿ- ರಾಗಿಮುದ್ದೆ ಉಣ್ಣುವ ಸ್ಪರ್ಧೆ ಗಮನ ಸೆಳೆದಿದೆ. ಸತಿ-ಪತಿ, ಕುಟುಂಬ ಸಮೇತ ರಕ್ತದಾನ ಮಾಡುತ್ತಾ ಇತರರಿಗೂ ಜಾಗೃತಿ ಮೂಡಿಸುತ್ತಿದ್ದಾರೆ. ಸಸಿಗಳ ವಿತರಣೆ ಸೇರಿದಂತೆ ಪರಿಸರ ಜಾಗೃತಿ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ನಗರದ ಮಹಿಳಾ ಸರ್ಕಾರಿ ಕಾಲೇಜಿನ ವನರಂಗದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ನೆರೆಹೊರೆ ಸಂಸತ್ ಹಾಗೂ ಯುವ ಸಂಪರ್ಕ ಸಭೆ/ಕಾರ್ಯಾಗಾರದಲ್ಲಿ ಸಂಸದೆ ಪ್ರದಾನ ಮಾಡಿದರು. ಬಳಗದ ಪರವಾಗಿ ಅನಿತಾ ಎನ್.ಹರೀಶ್ ಮತ್ತು ಪವಿತ್ರಾ ಆರ್.ಸತೀಶ್ ಪ್ರಶಸ್ತಿ ಸ್ವೀಕರಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಎನ್‌ವೈಕೆ ಪ್ರಾದೇಶಿಕ ಅಧಿಕಾರಿ ಎಂ.ಎನ್.ನಟರಾಜು, ನೆಹರು ಯುವ ಕೇಂದ್ರದ ಜಿಲ್ಲಾ ಅಧಿಕಾರಿ ಕೆ.ರಾಜೇಶ್ ಕಾರಂತ, ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಓಂ ಪ್ರಕಾಶ್, ಮಹಿಳಾ ಸರ್ಕಾರಿ ಕಾಲೇಜು ಪ್ರಾಂಶುಪಾಲೆ ಹೇಮಾಲತಾ, ಡಾ.ಕೆಂಪಮ್ಮ, ನೆಲದನಿ ಬಳಗದ ಅಧ್ಯಕ್ಷ ಲಂಕೇಶ್ ಮಂಗಲ, ಉಪಾಧ್ಯಕ್ಷ ಪ್ರತಾಪ್, ಸುನೀತಾ, ಎಂ.ಸಿ.ಕುಮಾರ್‌ಗೌಡ, ಮಹದೇವಸ್ವಾಮಿ, ಶಿವಮಲ್ಲು, ರಕ್ಷಿತ್‌ರಾಜ್, ಬಿ.ರಾಜ್, ಟಿ.ಡಿ.ನಾಗರಾಜು ಇತರರಿದ್ದರು.