ದುರ್ಗಾದೇವಿ ಉತ್ಸವಕ್ಕೆ ರಂಭಾಪುರಿ ಶ್ರೀಗಳ ಶುಭ ಹಾರೈಕೆ

bhr 1 (16)
Published on

ಬಾಳೆಹೊನ್ನೂರು: ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ ಮಾರ್ಕಾಂಡೇಶ್ವರ ದೇಗುಲದ ಆವರಣದಲ್ಲಿ ನಡೆಯಲಿರುವ 16ನೇ ವರ್ಷದ ದುರ್ಗಾದೇವಿ ನವರಾತ್ರಿ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ನೀಡಿ ಆಶೀರ್ವಾದ ಪಡೆಯಲಾಯಿತು.

ರಂಭಾಪುರಿ ಪೀಠದಲ್ಲಿ ದುರ್ಗಾ ಸಮಿತಿಯ ಫಲ ಸಮರ್ಪಣೆ ಸ್ವೀಕರಿಸಿ ಆಶೀರ್ವಚನ ನೀಡಿದ ಜಗದ್ಗುರುಗಳು, ಬಾಳೆಹೊನ್ನೂರಿನಲ್ಲಿ ಕಳೆದ 15 ವರ್ಷಗಳಿಂದ ಯುವಕರು ಒಗ್ಗೂಡಿ ನವರಾತ್ರಿ ಮಹೋತ್ಸವವನ್ನು ಧಾರ್ಮಿಕ, ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರುತ್ತಿರುವುದು ಉತ್ತಮ ಕಾರ್ಯವಾಗಿದ್ದು, ಈ ಕಾರ್ಯ ನಿರಂತರವಾಗಿ ಮುನ್ನಡೆಯಲಿ. ನಾಡಿನಲ್ಲಿ ಶಾಂತಿ, ಸಮೃದ್ಧಿ ನೆಲೆಸಿ ಸರ್ವರೂ ಸುಖ ಶಾಂತಿಯಿಂದ ಬಾಳಬೇಕು ಎಂಬುದು ನಮ್ಮ ಆಶಯವಾಗಿದ್ದು, ಸಮಾಜದಲ್ಲಿ ಎಲ್ಲ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲು ತಾಯಿ ದುರ್ಗೆಯ ಆಶೀರ್ವಾದ ಬೇಕಿದೆ. ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಯ ಉದ್ದೇಶವೇ ನವರಾತ್ರಿಯಾಗಿದ್ದು, ದುಷ್ಟಶಕ್ತಿಯು ದೂರಾಗಿ ಎಲ್ಲೆಡೆ ಶಾಂತಿ, ಆರೋಗ್ಯ, ನೆಮ್ಮದಿ ನೆಲೆಸಬೇಕಿದೆ ಎಂದರು.

ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಪ್ರಚಾರ ಸಮಿತಿ ಸದಸ್ಯ ಬಿ.ಜಗದೀಶ್ಚಂದ್ರ, ಮಂಜು ಹೊಳೆಬಾಗಿಲು, ಪ್ರಭಾಕರಶೆಟ್ಟಿ, ಎಚ್.ಗೋಪಾಲ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net