

ಮೈಸೂರು: ನಾಡಹಬ್ಬ ದಸರಾ ಇತಿಹಾಸದಲ್ಲಿಯೇ ಈ ಬಾರಿ ಅತ್ಯುತ್ತಮ ಟ್ರಾಫಿಕ್ ನಿರ್ವಹಣೆ ಕಂಡು ಬಂತು. ಟ್ರಾಫಿಕ್ ವ್ಯವಸ್ಥೆ ಅತ್ಯುತ್ತಮವಾ ಗಿದ್ದ ಹಿನ್ನೆಲೆಯಲ್ಲಿ ಈ ಬಾರಿ ಜನರು ವಿದ್ಯುತ್ ದೀಪಾಲಂಕಾರ ವೀಕ್ಷಿಸಲು ಹೆಚ್ಚಿನ ಆಯಾಸ ಪಡುವ ಪರಿಸ್ಥಿತಿ ನಿರ್ಮಾಣವಾಗಲಿಲ್ಲ.
ಪ್ರತಿ ವರ್ಷ ದೀಪಾಲಂಕಾರ ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಆದರೆ, ಟ್ರಾಫಿಕ್ ಸಮಸ್ಯೆಯಿಂದ ಸಾಕಷ್ಟು ಜನರಿಗೆ ನಗರದ ಎಲ್ಲ ಕಡೆ ಸಂಚರಿಸಿ ವಿದ್ಯುತ್ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈ ಬಾರಿ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ನೇತೃತ್ವದಲ್ಲಿ ಅತ್ಯುತ್ತಮ ಟ್ರಾಫಿಕ್ ವ್ಯವಸ್ಥೆ ನಿರ್ಮಾಣ ಮಾಡಲಾಯಿತು. ಬಹುತೇಕ ಎಲ್ಲ ಪ್ರಮುಖ ರಸ್ತೆಗಳು ಹಾಗೂ ಕೆಲವು ಅಡ್ಡ ರಸ್ತೆಗಳಲ್ಲಿ ಏಕಮುಕ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಯಿತು. ಹೀಗಾಗಿ ವಾಹನ ಸಂಚಾರ ಸುಗಮ ವಾಯಿತು.
ದಸರಾ ಸಂದರ್ಭ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಕಂಡು ಬಂದರೂ ಎಲ್ಲೂ ಕೂಡ ಟ್ರಾಫಿಕ್ ನಡುವೆ ವಾಹನ ಸವಾರರು ಸಿಲುಕಿಕೊಂಡು ಸಮಸ್ಯೆ ಎದುರಿಸುವ ಪರಿಸ್ಥಿತಿ ಹೆಚ್ಚಾಗಿ ಕಂಡು ಬರಲಿಲ್ಲ. ಬಹುತೇಕ ರಸ್ತೆಗಳು ಏಕಮುಖ ಸಂಚಾರಕ್ಕೆ ಮುಕ್ತವಾದ ಹಿನ್ನೆಲೆಯಲ್ಲಿ ವಾಹನಗಳು ಅತ್ಯಂತ ಸರಾಗವಾಗಿ ಸಂಚರಿಸಿದವು.
ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಜನದಟ್ಟಣೆ ಕಂಡು ಬರುವ ಅರಮನೆ ಸುತ್ತಮುತ್ತಲಿನ ಪ್ರದೇಶ ಹಾಗೂ ಯುವ ದಸರಾ ನಡೆಯುವ ಮಹಾರಾಜ ಕಾಲೇಜು ಮೈದಾನದಲ್ಲೂ ವಾಹನ ಸಂಚಾರಕ್ಕೆ ಸುಗಮ ವ್ಯವಸ್ಥೆ ನಿರ್ಮಾಣ ಮಾಡಲಾಯಿತು. ಯುವ ದಸರಾದ ಮೊದಲ ದಿನ ನಿರೀಕ್ಷೆಗೂ ಮೀರಿ ಜನರು ಆಗಮಿಸಿದ ಹಿನ್ನೆಲೆಯಲ್ಲಿ ಒಂದಷ್ಟು ಹೊತ್ತು ಟ್ರಾಫಿಕ್ ಸಮಸ್ಯೆ ಉಂಟಾಗಿದ್ದನ್ನು ಹೊರತು ಪಡಿಸಿದರೆ ಉಳಿದ ದಿನಗಳಲ್ಲಿ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಎದುರಾಗಲಿಲ್ಲ.
ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಟ್ರಾಫಿಕ್ ಪೊಲೀಸ್ ತಂಡವನ್ನು ನಿಯೋಜಿಸಲಾಗಿತ್ತು. ಟ್ರಾಫಿಕ್ ಸಮಸ್ಯೆ ಕಂಡು ಬಂದರೆ ತಕ್ಷಣ ಸರಿಪಡಿಸುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದರು. ನಗರದ ಕೆಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಸುಗಮವಾಗಿದ್ದ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು ನಿಶ್ಚಿಂತೆಯಿಂದ ಇದ್ದ ದೃಶ್ಯಗಳು ಕಂಡು ಬಂತು. ಒಟ್ಟಾರೆ ಈ ಬಾರಿಯ ಟ್ರಾಫಿಕ್ ನಿರ್ವಹಣೆ ಜನ ಮೆಚ್ಚುವ ರೀತಿಯಲ್ಲಿ ಇತ್ತು.