ಆರ್.ನಾರಾಯಣಸ್ವಾಮಿಗೆ ಪ್ರಶಸ್ತಿ ಗರಿ

new
ಆರ್.ನಾರಾಯಣಸ್ವಾಮಿ
Published on

*ದೊಡ್ಡಬಳ್ಳಾಪುರ ತಾಲೂಕು ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ


ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ ತಾಲೂಕು ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆರ್.ನಾರಾಯಣಸ್ವಾಮಿ ಅವರು 2024ನೇ ಸಾಲಿನ ಕೇಂದ್ರ ಸರ್ಕಾರದ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 9 ವರ್ಷದಿಂದ ಮುಖ್ಯಶಿಕ್ಷಕರಾಗಿದ್ದು, ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಸಿಎಸ್‌ಆರ್ ಅನುದಾನ ಬಳಕೆ ಮಾಡಿದ ಹೆಗ್ಗಳಿಗೆ ಇವರದ್ದಾಗಿದೆ. ಬಾಶೆಟ್ಟಿ ಕೈಗಾರಿಕಾ ವಲಯದಲ್ಲಿನ ವಿವಿಧ ಕಂಪನಿಗಳ ಸಹಕಾರದಲ್ಲಿ ಸರ್ಕಾರಿ ಶಾಲೆಗೆ ಸುಸಜ್ಜಿತ ಕಟ್ಟಡ, ಕುಡಿವ ನೀರು, ಶೌಚಗೃಹ, ವಿದ್ಯಾರ್ಥಿಗಳು ಕುಳಿತುಕೊಳ್ಳಲು ಬೆಂಚ್ ಮತ್ತಿತರ ಸೌಕರ್ಯಗಳನ್ನು ದೊರಕಿಸಿಕೊಡುವಲ್ಲಿ ಇವರದು ಭಗೀರಥ ಪ್ರಯತ್ನ ಎಂಬ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದರ ಜತೆಗೆ ವಿವಿಧ ಎನ್‌ಜಿಒಗಳು ಹಾಗೂ ಶಾಲೆಯ ಎಸ್‌ಡಿಎಂಸಿ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಯಾವುದೇ ಪ್ರತಿಷ್ಟಿತ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ಸರ್ಕಾರಿ ಶಾಲೆಯಲ್ಲಿ ಮೂಲಸೌಕರ್ಯ ಕಲ್ಪಿಸುವಲ್ಲಿ ಇವರ ಯಶೋಗಾಥೆ ಮನೆಮಾತಾಗಿದೆ.
11 ನೇ ಪುತ್ರ: ಮೂಲತ ದೊಡ್ಡಬಳ್ಳಾಪುರ ತಾಲೂಕು ತಪಸೀಹಳ್ಳಿಯ ರಂಗಪ್ಪ ಹಾಗೂ ಪುಟ್ಟಮ್ಮ ಎಂಬ ರೈತ ದಂಪತಿಯ 11 ನೇ ಪುತ್ರರಾಗಿದ್ದಾರೆ. ಇವರ ಪತ್ನಿ ಪುಟ್ಟಗಂಗಮ್ಮ ದೊಡ್ಡಬಳ್ಳಾಪುರ ಸರ್ಕಾರಿ ಶಾಲೆ ಶಿಕ್ಷಿಯಾಗಿದ್ದು ಪುತ್ರ ಇಂಜಿನಿಯರ್ ಪದವಿಧರ ಹಾಗೂ ಪುತ್ರಿ ಕೃಷಿ ಇಲಾಖೆ ಅಧಿಕಾರಿಯಾಗಿದ್ದಾರೆ.
ಪ್ರೌಢಶಾಲೆ ಮಂಜೂರು: ಈ ಮೊದಲು ಬಾಶೆಟ್ಟಿಹಳ್ಳಿಯ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದ ಇವರು ಇಲ್ಲಿ ಪ್ರೌಢಶಾಲೆಯ ಅಗತ್ಯತೆ ಮನಗಂಡು ಡಿಡಿಪಿಐ ಸಹಕಾರದಲ್ಲಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದರು. ಸರ್ಕಾರದಿಂದ ಇದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿತು. ಇಷ್ಟೊತ್ತಿಗಾಗಲೇ ಇವರು ಮುಖ್ಯಶಿಕ್ಷಕರಾಗಿ ಬಡ್ತಿ ಪಡೆದಿದ್ದರು. ಗ್ರಾಮದ ಜನರ ಒತ್ತಾಸೆ ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳ ಸಹಕಾರದಿಂದ ಇದೇ ಶಾಲೆಗೆ ಮುಖ್ಯ ಶಿಕ್ಷಕರಾಗಿ ನಿಯೋಜನೆಗೊಂಡರು.
3.5 ಕೋಟಿ ರೂ. ವೆಚ್ಚ: ಪ್ರೌಢಶಾಲೆ ಆರಂಭಿಸಲು ಅನುಮತಿ ಸಿಗುತ್ತಿದ್ದಂತೆ ಸ್ಥಳೀಯ ಕಂಪನಿಗಳ ಸಿಎಸ್‌ಆರ್ ಅನುದಾನ, ದಾನಿಗಳ ಸಹಕಾರದಿಂದ ಸುಮಾರು 3.5 ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ಕಟ್ಟಡದ ಜತೆಗೆ ಮೂಲಸೌಕರ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಇವರು ಮುಂದಾಳತ್ವ ವಹಿಸಿದ್ದರು. ಪ್ರಸ್ತುತ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಮುಖ್ಯಶಿಕ್ಷಕರಾಗಿರುವ ನಾರಾಯಣಸ್ವಾಮಿ ಅವರ ಶೈಕ್ಷಣಿಕ ಕಾರ್ಯವೈಖರಿ ಜಿಲ್ಲೆಯಲ್ಲಿಯೇ ಮನೆಮಾತಾಗಿದೆ, ಇತರ ಶಾಲೆಗಳ ಶಿಕ್ಷಕರಿಗೆ ಇವರು ಮಾದರಿ ಎನ್ನಲಡ್ಡಿಯಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿಕೊಡುವ ಜತೆಜತೆಗೆ ಸಿಎಸ್‌ಆರ್ ಅನುದಾನವನ್ನು ಸದ್ಭಳಕೆ ಮಾಡಿಕೊಂಡು ಸರ್ಕಾರಿ ಶಾಲೆಯನ್ನು ಉತ್ತಮವಾಗಿ ನಿರ್ವಹಿಸುತ್ತಿರುವುದು ಇವರ ಹೆಗ್ಗಳಿಕೆ. ಸರಳ, ಸಜ್ಜನಿಕೆಯ ಇವರ ವ್ಯಕ್ತಿತ್ವದಿಂದಲೇ ಸಹದ್ಯೋಗಿಗಳು ಹಾಗೂ ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿದ್ದಾರೆ. ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ದೊರಕಿರುವುದು ನಮ್ಮ ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಂತಾಗಿದೆ.

ಕೃಷ್ಣಮೂರ್ತಿ, ಉಪನಿರ್ದೇಶಕ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂ.ಗ್ರಾಮಾಂತರ

ಈ ಪ್ರಶಸ್ತಿ ಸಿಕ್ಕಿರುವುದು ನನ್ನಲ್ಲಿ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ, ಮತ್ತಷ್ಟು ಶ್ರದ್ಧೆಯಿಂದ ಕರ್ತವ್ಯ ನಿಭಾಯಿಸಲು ಉತ್ಸಾಹ ತುಂಬಿದಂತಾಗಿದೆ. ಗ್ರಾಮದ ಜನರು, ಪಾಲಕರು, ಸಹದ್ಯೋಗಿಗಳು ಹಾಗೂ ಮುಖ್ಯವಾಗಿ ಇಲ್ಲಿನ ವಿದ್ಯಾರ್ಥಿಗಳ ಸಹಕಾರದಿಂದ ನನ್ನ ಕೈಲಾದ ಪ್ರಯತ್ನ ಮಾಡಿದ್ದೇನೆ. ಈ ಪ್ರಶಸ್ತಿಗೆ ಇವೆಲ್ಲರೂ ಸಲ್ಲಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮತ್ತಷ್ಟು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕು ಎಂಬುದು ನನ್ನ ಮನದಾಸೆಯಾಗಿದೆ.
ಆರ್.ನಾರಾಯಣಸ್ವಾಮಿ, ಮುಖ್ಯಶಿಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net