

ಮಂಡ್ಯ: ಗೋವಾದ ಪಣಜಿಯಲ್ಲಿ ಮೇ.21ರಂದು ನಡೆದ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮಂಡ್ಯ ತಾಲೂಕು ಸಾತನೂರು ಗ್ರಾಮದ ಕಿರಣ್‌ರಾಜ್ ನಿರ್ದೇಶನದ ‘ಲಾಟರಿ ಟಿಕೆಟ್’ ಕಿರುಚಿತ್ರಕ್ಕೆ ಬೆಸ್ಟ್ ಟೆಲಿ ಫಿಲ್ಮ್ ಹಾಗೂ ಬೆಸ್ಟ್ ಸ್ಕ್ರಿಪ್ಟ್ ರೈಟರ್ ಪ್ರಶಸ್ತಿ ಗೆದ್ದುಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡಸೇನೆ ಕರ್ನಾಟಕ ಸಂಘದ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಪ್ರತಿಭಾವಂತ ಕಿರಣ್‌ರಾಜ್ ಈವರೆಗೆ ಮೂರು ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಪೈಕಿ ಮೂರನೇ ಕಿರುಚಿತ್ರ ಲಾಟರಿ ಟಿಕೆಟ್ ಇಳಾ ಪ್ರೊಡೆಕ್ಷನ್‌ನಿಂದ ಮೂಡಿಬಂದಿದೆ. ಚಿತ್ರದ ಚಿತ್ರೀಕರಣ ಜಿಲ್ಲೆಯಲ್ಲಿ ನಡೆದಿದೆ. ಮಜಾಭಾರತ ಖ್ಯಾತಿಯ ಜಗ್ಗಪ್ಪ ಹಾಗೂ ಸುಶ್ಮಿತಾ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ ಎಂದರು.
ಕಿರುಚಿತ್ರ ಬಿಡುಗಡೆಗೆ ಮುನ್ನವೇ ಧಾರವಾಡದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಚಲನಚಿತ್ರ ಸ್ಪರ್ಧೆಯಲ್ಲಿ ಉತ್ತಮ ನಿರ್ದೇಶಕ ಹಾಗೂ ಉತ್ತಮ ನಟಿ ಎನ್ನುವ ಪ್ರಶಸ್ತಿ ಪಡೆದುಕೊಂಡಿತ್ತು. ಬಳಿಕ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿ ಲಕ್ಷಾಂತರ ಜನರು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗಂಡ ಮತ್ತು ಹೆಂಡತಿ ಸಂಬಂಧ ಕುರಿತು ಉತ್ತಮ ಸಂದೇಶವಿರುವ ಸಾಮಾಜಿಕ ಕಳಕಳಿಯನ್ನು ಹೊಂದಿದೆ. ಇದೀಗ ಕಿರಣ್‌ರಾಜ್ ಕನ್ನಡಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ ಎಂದು ವಿವರಿಸಿದರು.
ಕಿರುಚಿತ್ರ ನಿರ್ದೇಶಕ ಕಿರಣ್‌ರಾಜ್, ಸಂಘದ ರಾಜ್ಯ ಸಂಚಾಲಕ ಜಿ.ಮಹಾಂತಪ್ಪ, ಸಂಚಾಲಕ ಸಾತನೂರು ಶಿವರಾಜ್ ಇದ್ದರು.
ಸನ್ಮಾನ: ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕನ್ನಡಸೇನೆ ಕರ್ನಾಟಕ ಸಂಘದಿಂದ ಕಿರಣ್‌ರಾಜ್‌ಗೆ ಸನ್ಮಾನ ಮಾಡಲಾಯಿತು. ಇದೇ ವೇಳೆ ಆಗಮಿಸಿದ್ದ ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ಕೂಡ ಯುವ ನಿರ್ದೇಶಕನನ್ನು ಸನ್ಮಾನಿಸಿ ಶುಭ ಹಾರೈಸಿದರು.