ಡಾ.ಡಿ.ಡಿ. ನಾಯ್ಕಗೆ ಅತ್ಯುತ್ತಮ ರೋಟೇರಿಯನ್ ಪ್ರಶಸ್ತಿ

KMT Rotary
Published on

ಕುಮಟಾ: ಇಲ್ಲಿನ ರೋಟರಿ ಕ್ಲಬ್ 2024-25ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಾದಶ್ರೀ ಕಲಾಕೇಂದ್ರದಲ್ಲಿ ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ಅತುಲ ವಿಷ್ಣು ಕಾಮತ್ ಅಧಿಕಾರ ಸ್ವೀಕರಿಸಿದರು.

ಕಾರ್ಯದರ್ಶಿಯಾಗಿ ವಿನಾಯಕ ಎಸ್. ಹೆಗಡೆ, ಖಜಾಂಚಿಯಾಗಿ ಪವನ ಡಿ. ಶೆಟ್ಟಿ, ಆ್ಯನ್ಸ್ ಕ್ಲಬ್ ಅಧ್ಯಕ್ಷೆಯಾಗಿ ಮೇಧಾಶ್ರೀ ಕಾಮತ್, ಕಾರ್ಯದರ್ಶಿಯಾಗಿ ಸಂಧ್ಯಾ ಹೆಗಡೆ, ಖಜಾಂಚಿಯಾಗಿ ದೀಪಾ ನಾಯಕ ಪದಗ್ರಹಣ ಮಾಡಿದರು.

ಪದಗ್ರಹಣದ ಪ್ರತಿಜ್ಞಾ ಬೋಧಕರಾಗಿ ಕಾರ್ಯನಿರ್ವಹಿಸಿದ ಸಾಂಗ್ಲಿಯ ಮೋನಿಕಾ ಕಲ್ಲೊಳ್ಳಿ ಮಾತನಾಡಿ, ಕುಮಟಾ ರೋಟರಿ ಕ್ಲಬ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮಾಜ ಸೇವೆಯಲ್ಲಿ ತನ್ನದೇ ಛಾಪು ಮೂಡಿಸಿದೆ. ಅತುಲ ಕಾಮತ್ ನೇತೃತ್ವದಲ್ಲಿ ರೋಟರಿ ಕ್ಲಬ್ ಹೊಸ ಮೈಲುಗಲ್ಲುಗಳನ್ನು ದಾಟಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಅಸಿಸ್ಟಂಟ್ ಗವರ್ನರ್ ಹೊನ್ನಾವರದ ಮಾನ್ವೇಲ್ ಸ್ಟೀಫನ್ ರೋಡ್ರಿಗ್ಸ ಮಾತನಾಡಿದರು. ಅತ್ಯುತ್ತಮ ರೋಟೇರಿಯನ್ ಪ್ರಶಸ್ತಿಯನ್ನು ಹಿರಿಯ ರೋಟರಿ ಸದಸ್ಯ ಡಾ. ಡಿ.ಡಿ. ನಾಯಕ ಅವರಿಗೆ ಪ್ರದಾನ ಮಾಡಲಾಯಿತು.

ರೋಟರಿ ನಿಕಟಪೂರ್ವ ಅಧ್ಯಕ್ಷ ಎನ್.ಆರ್. ಗಜು, ಕಾರ್ಯದರ್ಶಿ ರಾಮದಾಸ ಗುನಗಿ, ಸಂದೀಪ ನಾಯಕ, ವಸಂತ ರಾವ್, ಸುರೇಶ ಭಟ್ ಇತರರು ಉಪಸ್ಥಿತರಿದ್ದರು. ರೋಟರಿಗೆ ನೂತನವಾಗಿ ಹಲವು ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net