

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರದ ಕಂದಾಯ ಇಲಾಖೆ ಸೇವೆಗಳನ್ನು ಜನರಿಗೆ ಅತ್ಯುತ್ತಮ ರೀತಿಯಲ್ಲಿ ತಲುಪಿಸಿರುವ ಮತ್ತು ಚಿತ್ರದುರ್ಗ ಹಾಗೂ ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಜನಸ್ನೇಹಿ, ನಾಗರಿಕಸ್ನೇಹಿ ಆಡಳಿತ ನೀಡಿರುವ ದಿವ್ಯ ಪ್ರಭು ಜಿ.ಆರ್.ಜೆ ಅವರಿಗೆ ರಾಜ್ಯ ಸರ್ಕಾರದ ಕಂದಾಯ ಇಲಾಖೆಯಿಂದ 2023-24ನೇ ಸಾಲಿಗೆ ಉತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ ನೀಡಲಾಗಿದೆ.
ಇದಲ್ಲದೆ ಧಾರವಾಡ ತಹಸೀಲ್ದಾರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿ ರಾಕೇಶ ತಂಗಡಗಿ ಅವರಿಗೆ 2023-24ನೇ ಸಾಲಿಗೆ ವರ್ಷದ ಅತ್ಯುತ್ತಮ ಗ್ರಾಮ ಆಡಳಿತ ಅಧಿಕಾರಿ ಪ್ರಶಸ್ತಿ ನೀಡಲಾಗಿದೆ. ಸೆ. 27ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.