

ಮಡಿಕೇರಿ: ಪೊಮ್ಮಾಲೆ ಕೊಡಗ್ ಕೊಡವ ಸಿನಿಮಾದ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪರವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ.
ಅ.೮ ರಂದು ಮಹಾರಾಷ್ಟ್ರದ ಔರಂಗಬಾದ್ ಶಿಲೋಡಿನಲ್ಲಿ ನಡೆಯುವ ಐಡಿಯಲ್ ಅಂತರ ರಾಷ್ಟ್ರೀಯ ಸಿನಿಮೋತ್ಸವದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಕಾಶ್ ಕಾರ್ಯಪ್ಪರವರು ಪ್ರಶಸ್ತಿ ಪಡೆಯಲಿದ್ದಾರೆ.
೨೦೨೨ರಲ್ಲಿ ಸ್ವಸ್ತಿಕ್ ಎಂಟರ್ ಟೈನ್‌ಮೆಂಟ್ ಬ್ಯಾನರ್ ಅಡಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ಮಾಣದಲ್ಲಿ ಹಲವು ಯಶಸ್ವಿ ಕೊಡವ ಮತ್ತು ಕನ್ನಡ ಸಿನಿಮಾಗಳು ತೆರೆಗೆ ಬಂದಿವೆ. ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದು ಖ್ಯಾತಿ ಗಳಿಸಿರುವ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪರವರು ಪೊಮ್ಮಾಲೆ ಕೊಡಗ್ ಕೊಡವ ಚಿತ್ರವನ್ನು ನಿರ್ದೇಶಿಸಿ ಹೆಸರುಗಳಿಸಿದ್ದಾರೆ. ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವದ ಎನ್‌ಎಫ್‌ಡಿಸಿ ಫಿಲಂ ಬಜಾರ್ ನಲ್ಲಿ ಪ್ರಥಮ ಬಾರಿಕಗೆ ಪ್ರದರ್ಶನ ಕಂಡ ಮೊದಲ ಕೊಡವ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ.
ಅಲ್ಲದೇ ಕೊಲ್ಕತ್ತ ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್‌ನಲ್ಲಿ ಏಷ್ಯನ್ ವಿಭಾಗದ ಸ್ಪರ್ಧೆಗೆ ಆಯ್ಕೆಯಾದ ಮೊದಲ ಕೊಡವ ಸಿನಿಮಾ ಇದಾಗಿದೆ. ಬಿಎಸ್‌ಈಎಫ್‌ಎಫ್ ಬಯೋಸ್ಕೋಪ್ ಅಂತರಾಷ್ಟ್ರೀಯ, ಒಎಲ್‌ಐಎಫ್‌ಎಫ್ ಒನ್ ಲೀಫ್ ಅಂತರಾಷ್ಟ್ರೀಯ, ಟಿಐಎಫ್‌ಎಫ್-ತಮಿಳುನಾಡ್ ಅಂತರಾಷ್ಟ್ರೀಯ, ಆರ್‌ಐಎಫ್‌ಎಫ್-ರೇಡಿಯಂಟ್ ಅಂತರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಬೆಸ್ಟ್ ಸಿನಿಮೋಟೋಗ್ರಾಫಿ, ಬೆಸ್ಟ್ ಆಕ್ಟ್ರೆಸ್ಸ್, ಬೆಸ್ಟ್ ಸೋಶಿಯಲ್ ಫಿಲಂ, ಬೆಸ್ಟ್ ಕಾನ್ಸೆಪ್ಟ್, ಬೆಸ್ಟ್ ಸ್ಕ್ರೀನ್ ಪ್ಲೇ ಹೀಗೆ ಹಲವು ವಿಭಾಗದಲ್ಲಿ ೧೩ ಪ್ರಶಸ್ತಿಗಳನ್ನು ಪಡೆದು ಇದೀಗ ೩ನೇ ಐಡಿಯಲ್ ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಆಯ್ಕೆಯಾಗಿದೆ.
ಕೊಟ್ಟುಕತ್ತೀರ ಪ್ರಕಾಶ್ ಹಾಗೂ ಯಶೋಧ ದಂಪತಿ ನಿರ್ಮಿಸಿ, ನಿರ್ದೇಶಿಸಿದ ನಾಲ್ಕು ಕೊಡವ ಚಿತ್ರಗಳು ವಿವಿಧ ರಾಜ್ಯಗಳಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸಗಳಿಗೆ ಆಯ್ಕೆಯಾಗಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿವೆ.