

ಮೈಸೂರು: ಪ್ರತಿಪುಟವನ್ನು ಕುತೂಹಲದಿಂದ ಓದಿಸಿಕೊಂಡು ಹೋಗುವ ಜತೆಗೆ ಓದುಗರೊಳಗೊಂದು ನದಿ ಹರಿದಂತೆ ಅನುಭವ ಅದಾಗಲೇ ಪುಸ್ತಕ ಅತ್ಯುತ್ತಮವಾಗುತ್ತದೆ ಎಂದು ನಟ, ನಿರ್ದೇಶಕ ರಮೇಶ್ ಅರವಿಂದ್ ಅಭಿಪ್ರಾಯಪಟ್ಟರು.
ಮೈಸೂರು ಲಿಟರರಿ ಫೋರಂ ಚಾರಿಟೆಬಲ್ ಟ್ರಸ್ಟ್ ಹಾಗೂ ಮೈಸೂರು ಬುಕ್ ಕ್ಲಬ್‌ನಿಂದ ನಗರದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ‘ ಮೈಸೂರು ಸಾಹಿತ್ಯ ಸಂಭ್ರಮ-2024’ 8ನೇ ಅವೃತ್ತಿಯಲ್ಲಿ ಅವರು ಮಾತನಾಡಿದರು.
ಪ್ರತಿ ಪುಟ ಓದಿದಾಗಲೂ ಮುಂದೆ ಎಂಬ ಕುತೂಹಲ ಮೂಡಿಸುತ್ತದೆಯೋ ಅದೇ ಅತ್ಯುತ್ತಮ ಪುಸ್ತಕ. ಅತ್ಯುತ್ತಮ ಪುಸ್ತಕಗಳನ್ನು ಓದಿದಾಗ ನಿಮ್ಮೊಳಗೊಂದು ನದಿ ಹರಿದ ಅನುಭವವಾಗುತ್ತದೆ. ಭಾರತದಲ್ಲಿ ಸರಸ್ವತಿ ನದಿಯನ್ನು ಮೃತ ನದಿ, ಗುಪ್ತಗಾಮಿನಿ ಎನ್ನುತ್ತಾರೆ. ಕೆಲವರು ಅದು ಈಗಲೂ ಜೀವಂತವಾಗಿದೆ ಎನ್ನುತ್ತಾರೆ. ಅದೇನೇ ಆದರೂ ಪುಸ್ತಕಗಳನ್ನು ಓದಿದಾಗ ನಮ್ಮ-ನಿಮ್ಮಲ್ಲೊಬ್ಬಳು ಸರಸ್ವತಿ ನದಿ ಹರಿಯುತ್ತಾಳೆ ಎಂದು ಪುಸ್ತಕದ ಮಹತ್ವವನ್ನು ಬಣ್ಣಿಸಿದರು.
ನಾನು ಸಾಕಷ್ಟು ಪುಸ್ತಕಗಳನ್ನು ಓದಿ ಸಂತೋಷಪಟ್ಟಿದ್ದೇನೆ. ನನ್ನ ಸಾಹಿತ್ಯದ ಜತೆಗಿನ ಜೀವನ ವೈವಾಹಿಕ ಜೀವನಕ್ಕಿಂತಲೂ 10 ವರ್ಷ ಹಿರಿದು. ಈ ಸುದೀರ್ಘ ಅವಧಿಯಲ್ಲಿ ನಾನು ಅನೇಕ ಮಹನೀಯರು, ಲೇಖಕರು, ಸಾಹಿತಿಗಳ ತತ್ವ-ಸಿದ್ಧಾಂತಗಳನ್ನು ಕಲಿಯಲು ತೀವ್ರವಾಗಿ ಪ್ರಯತ್ನಿಸಿದ್ದೇನೆ. ಅದರಲ್ಲಿ ಭಾಗಶಃ ಸಫಲತೆ ಕಂಡಿದ್ದೇನೆ. ಹೀಗಾಗಿಯೇ ನನ್ನ ಜೀವನದ ಒಂದೊಂದು ಘಟ್ಟದಲ್ಲಿನ ಅನುಭವ ಮತ್ತು ಸಾಹಿತ್ಯಾಸಕ್ತಿಯ ಕಾರಣದಿಂದ ‘ಪ್ರೀತಿಯಿಂದ ರಮೇಶ್’ ಕಾರ್ಯಕ್ರಮ ಆರಂಭಿಸುವಂತಾಯಿತು ಎಂದು ಹೇಳಿದರು.
ಚಿತ್ರೀಕರಣಕ್ಕಾಗಿ ನಾನು ಸಾಕಷ್ಟು ಬಾರಿ ಮೈಸೂರಿಗೆ ಬಂದಿದ್ದೇನೆ. ಸಾಹಿತ್ಯ ಕಾರ್ಯಕ್ರಮಕ್ಕೆ ಬಂದಿರುವುದು ಖುಷಿ ತಂದಿದೆ. ಮೈಸೂರು ಎಂದಾಕ್ಷಣ ಸಿನಿಮಾ, ದಸರಾ, ಆನೆ ಹೀಗೆ ಅನೇಕ ವಿಷಯಗಳು ಸ್ಮತಿಪಟಲದಲ್ಲಿ ಹಾಗೇ ಬಂದು ಹೀಗೆ ಹೋದವು. ಸಾಹಿತ್ಯವೂ ಹಾಗೆ ಯಾವ ಸಂದರ್ಭದಲ್ಲಿ ಆಲೋಚನೆಗಳು ಮನಸ್ಸಿಗೆ ಬರುತ್ತದೆಯೋ ಆ ಕ್ಷಣದಲ್ಲಿ ಬರೆದು ಮುಗಿಸಬೇಕು ಎಂದು ಸಲಹೆ ನೀಡಿದರು.
ಸಾಹಿತ್ಯದ ಜತೆಗಿನ ನನ್ನ ಸಂಬಂಧವು ಜ್ಞಾನ, ಸಂತೋಷ ಮತ್ತು ಉತ್ತೇಜನವನ್ನು ನೀಡಿದೆ. ಬರಹವು ಒಂದು ರೀತಿಯಲ್ಲಿ ವಿಭಿನ್ನ ಆಲೋಚನೆಯನ್ನು ಹೊಂದಿರುತ್ತದೆ. ನಾವು ಪ್ರಪಂಚವನ್ನು ಯಾವ ಬಣ್ಣದ ಗಾಜಿನಿಂದ ನೋಡುತ್ತೇಯೋ ಆ ಬಣದಲ್ಲಿ ಪ್ರಪಂಚ ಕಾಣುತ್ತದೆ. ‘ಹೂಮಳೆ’ ಚಿತ್ರವನ್ನು ಅಸ್ಸಾಂನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಸಿನಿಮಾದಲ್ಲಿ ನದಿಯನ್ನು ಪೂರ್ತಾ ರಕ್ತಸಿಕ್ತವಾಗಿರುವಂತೆ ಚಿತ್ರೀಕರಣ ಮಾಡಬೇಕಾಗಿತ್ತು. ಆದರೆ ಅಷ್ಟು ಬಜೆಟ್ ನಮ್ಮಲ್ಲಿ ಇರಲಿಲ್ಲ. ಆಗ ಲೇಖಕ ಆರ್.ಕೆ.ನಾರಯಣ ಅವರ ‘ಕೋಟ್ಸ್’ ಜ್ಞಾಪಕಕ್ಕೆ ಬಂತು. ಕೆಂಪು ಗಾಜನ್ನು ಕ್ಯಾಮೆರಾದ ಮುಂದೆ ಇಟ್ಟು ಬ್ರಹ್ಮಪುತ್ರ ನದಿಯನ್ನು ನೋಡಿದಾಗ ನದಿಯ ನೀರೆಲ್ಲ ರಕ್ತದಂತೆ ಗೋಚರಿಸಿತು. ಇದೇ ಅಲ್ಲವೆ ಸಾಹಿತ್ಯ ಶಕ್ತಿ ಎಂದು ನೆನಪುಗಳ ‘ರೀಲ್’ಅನ್ನು ಪ್ರದರ್ಶನಗೊಳಿಸಿದರು ಎಂದು ವಿವರಿಸಿದರು.
ಪರಿಸರವಾದಿ ಸುರೇಶ್ ಹೆಬ್ಳೀಕರ್, ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಶುಭಾ ಸಂಜಯ್ ಅರಸ್, ಪದಾಧಿಕಾರಿಗಳಾದ ಸ್ಯಾಮ್ ಚರಿಯನ್, ಸಿ.ಆರ್.ಹನುಮಂತ್, ದಿವ್ಯಶ್ರೀ, ಸುಚಿತಾ, ರೆಹಾನ್ ಇರಾನಿ, ಆಂಗ್ಲ ಲೇಖಕ ಅರೂನ್ ರಾಮನ್ ಇದ್ದರು.
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ‘ಜ್ಞಾನ ದೀವಿಗೆ’ಯನ್ನು ಬೆಳಗುವವ ಮೂಲಕ ಸಾಹಿತ್ಯ ಸಂಭ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿ, ಇಂತಹ ಸಾಹಿತ್ಯ ಉತ್ಸವ-ಸಂಭ್ರಮಗಳು ಲೇಖಕರ ಅಭಿವ್ಯಕ್ತಿಯನ್ನು ಪ್ರಕಟಗೊಳಿಸಲು ಉತ್ತಮ ವೇದಿಕೆಯಾಗಿವೆ. ಮೈಸೂರು ಕಾಲದಿಂದಲೂ ಸಾಹಿತ್ಯ-ಸಂಸ್ಕೃತಿಗೆ ಹೆಸರುವಾಸಿ. ಇಂತಹ ನೆಲದಲಿ ನಡೆಯುತ್ತಿರುವ ಈ ಉತ್ಸವ ವರ್ಷದಿಂದ-ವರ್ಷಕ್ಕೆ ಹೆಚ್ಚು ಜನರನ್ನು ತಲುಪುತ್ತಿರುವುದು ಶ್ಲಾಘನೀಯ ಎಂದರು.