

ಮಂಡ್ಯ: ಪ್ರಸ್ತುತ ದಿನಗಳಲ್ಲಿ ಬೇಸಿಗೆ ಶಿಬಿರಗಳು ವಾಣಿಜ್ಯೀಕರಣಗೊಂಡು ಹಣ ವಸೂಲಿ ಮಾಡಲಾಗುತ್ತಿದೆ ಎಂದು ಭಾರತ್ ಸೇವಾದಳ ಜಿಲ್ಲಾ ಸಮಿತಿ ಕಾರ್ಯದರ್ಶಿ ಜಿ.ವಿ.ನಾಗರಾಜು ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಬೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತ್ ಸೇವಾದಳ ಜಿಲ್ಲಾ ಸಮಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ದಕ್ಷಿಣ ವಲಯ ಸಹಯೋಗದಲ್ಲಿ ಆಯೋಜಿಸಿದ್ದ ಒಂದು ವಾರದ ಜಿಲ್ಲಾಮಟ್ಟದ ಬೇಸಿಗೆ ಶಿಬಿರ ಮತ್ತು ನಾಯಕತ್ವ ತರಬೇತಿಯ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಾಲಾ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯ ದಿನಗಳು ಉಪಯುಕ್ತವಾಗಿರಬೇಕು. ಭಾರತ್ ಸೇವಾದಳದಿಂದ ಉಪಯುಕ್ತ ಕಾರ್ಯಗಳನ್ನು ಮಾಡಿ ಮಕ್ಕಳಿಗೆ ನಾಯಕತ್ವ ತರಬೇತಿ ನೀಡಿ ರಾಷ್ಟ್ರಕ್ಕೆ ಕೊಡುಗೆ ನೀಡುವ ಸುಕಾರ್ಯ ಸಾಗಲಿ. ಗ್ರಾಮೀಣ ಕ್ರೀಡೆಗಳು, ಸಾಂಸ್ಕೃತಿಕ ಮನರಂಜನೆ ಲಭಿಸಲಿ ಎಂಬುದು ಶಿಬಿರದ ಸದುದ್ದೇಶ ಸಾರ್ಥಕ ಪಡೆದಿದೆ. ಬೇಸಿಗೆ ಶಿಬಿರಗಳು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿರಬೇಕು. ಅಂತೆಯೇ ಹೊಸ ಆಲೋಚನೆಗಳನ್ನು ಹೆಚ್ಚಿಸಬೇಕಿದೆ, ಅವಿಷ್ಕಾರಗಳ ಬಗ್ಗೆ ತಿಳಿಸಿ, ಕ್ರೀಡಾಸಕ್ತಿ, ರಾಷ್ಟ್ರಪ್ರೇಮ, ರಾಷ್ಟಭಕ್ತಿ ಬೆಳೆಸುವ ಕೆಲಸವಾಗಬೇಕಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಬಿ.ಕೆ.ಉಮೇಶ್, ಉಪನ್ಯಾಸಕಿ ಆರ್.ಪಿ.ಛಾಯಾ, ಸಂಪನ್ಮೂಲ ವ್ಯಕ್ತಿ ಉಷಾರಾಣಿ, ಸಿ.ಎಸ್.ಗಣೇಶ್, ಶಿವಪ್ರಕಾಶ್‌ಬಾಬು, ಎಂ.ಎಲ್.ಪ್ರಕಾಶ್ ಇತರರಿದ್ದರು.