

ಅರಕಲಗೂಡು: ಸಮರ್ಪಕವಾಗಿ ವಿದ್ಯುತ್ ಸರಬರಾಜಿಗೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಬುಧವಾರ ತಾಲೂಕಿನ ಕಾರಹಳ್ಳಿ ಬಳಿಯ ವಿದ್ಯುತ್ ವಿತರಣಾ ಘಟಕಕ್ಕೆ ಜಾನುವಾರುಗಳೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು ಹಾಗೂ ಸಂಘದ ಸದಸ್ಯರು ಸೆಸ್ಕ್ ಇಂಜಿನಿಯರ್ ವಿರುದ್ಧ ಘೋಷಣೆ ಕೂಗಿದರು.
ಮಳೆಯಿಲ್ಲದೆ ಬರ ತಾಂಡವಾಡುತ್ತಿದೆ. ಹನಿ ನೀರಿಲ್ಲದೆ ರೈತರು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲಾಗದೆ ಪರದಾಡುತ್ತಿದ್ದಾರೆ. ಈ ನಡುವೆ ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ. ಅಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುತ್ತಿರುವ ಪರಿಣಾಮ ಬಹಳಷ್ಟು ಮೋಟಾರ್‌ಗಳು ಸುಟ್ಟು ರೈತರು ಕಣ್ಣೀರಿಡುವಂತಾಗಿದೆ. ಬೆಳೆ ಕಳೆದುಕೊಳ್ಳುವ ಜತೆಗೆ ಕೆಟ್ಟ ಮೋಟಾರ್‌ಗಳನ್ನು ಸರಿಪಡಿಸಲಾಗದೆ ರೈತರಿಗೆ ಗಾಯದ ಮೇಲೆ ಬರೆ ಎಳೆಯಲಾಗುತ್ತಿದೆ. ಇಂಜಿನಿಯರ್‌ಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಮನಸ್ಸೋ ಇಚ್ಛೆಯಿಂದ ವರ್ತಿಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಯೋಗಣ್ಣ ಆಪಾದಿಸಿದರು.
ಕ್ಷೇತ್ರದ ಜನಪ್ರತಿನಿಧಿ ರೈತರ ಗೋಳಿಗೆ ಸ್ಪಂದಿಸಬೇಕು. ಸಮರ್ಪಕವಾಗಿ ವಿದ್ಯುತ್ ನೀಡದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು. ಸೆಸ್ಕ್ ಎಇಇ ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ಮುಖಂಡರಾದ ಜಗನ್ನಾಥ, ಶಿವಣ್ಣ, ರಘು, ಪ್ರಕಾಶ್, ಲೋಕೇಶ್, ಕುಮಾರ್, ಅಶೋಕ್, ವೇದಾನಂದ, ಶಿವಾನಂದ, ಜಗದೀಶ್, ನವೀನ್, ಚಂದ್ರು, ಜಯರಾಂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.