

ಜಮಖಂಡಿ: ತುಬಚಿ, ಶೂರ್ಪಾಲಿ ಗ್ರಾಮಗಳಲ್ಲಿ ಪ್ರವಾಹ ಪೀಡಿತ ಸಂತ್ರಸ್ತರನ್ನು ಬಿಟ್ಟು ಬೇರೆಯವರಿಗೆ ಪರಿಹಾರ ಧನ ನೀಡುತಿದ್ದಾರೆ ಎಂದು ಆರೋಪಿಸಿ ತಹಸೀಲ್ದಾರ್ ಸದಾಶಿವ ಮಕ್ಕೋಜಿ ಅವರಿಗೆ ಗ್ರಾಮಸ್ಥರು ಶುಕ್ರವಾರ ಮುತ್ತಿಗೆ ಹಾಕಿದರು.
ನಗರದ ತಾಪಂ ಕಚೇರಿ ಆವರಣದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ಸಂತ್ರಸ್ತರು, ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದರು.
524 ಮೀ. ನೀರು ಬಂದರೂ ಅವರ ಜಮೀನುಗಳಿಗೆ ಬಾರದಿದ್ದರೂ ಅಂತವರ ಜಮೀನುಗಳನ್ನು ಸರ್ವೇ ವರದಿಯಲ್ಲಿ ಸೇರಿಸಿದ್ದಾರೆ. ಪ್ರವಾಹ ಸಂದರ್ಭ ಜಮೀನು ಮುಳುಗಿ ಬೆಳೆ ಹಾಳಾದ ನಿಜವಾದ ಸಂತ್ರಸ್ತರಿಗೆ ಇನ್ನೂವರೆಗೂ ಪರಿಹಾರ ಬಂದಿಲ್ಲ. ಇದಕ್ಕೆ ಕಾರಣಿಭೂತರಾದ ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಇದನ್ನು ಪ್ರಶ್ನಿಸಿದರೆ ತಲಾಟಿ ಅವರು ನೀವು 10 ಸಾವಿರ ರೂ. ಕೊಡ್ರಿ ನಿಮಗೂ ಪರಿಹಾರ ಬರುವಂತೆ ಮಾಡುತ್ತೇವೆ ಎನ್ನುತ್ತಾರೆ ಎಂದು ಆರೋಪಿಸಿದರು.
ಗ್ರಾಮಗಳಲ್ಲಿನ ಪರಿಹಾರ ಸರ್ವೇ ವರದಿಯಲ್ಲಿ ಹೆಸರು ಸೆರಿಸುವುದಕ್ಕಾಗಿ 13 ರಿಂದ 14 ಲಕ್ಷಕ್ಕೂ ಅಧಿಕ ಹಣ ಭ್ರಷ್ಟಾಚಾರ ನಡೆದಿದ್ದು, ಕೂಡಲೇ ಇದನ್ನು ತನಿಖೆ ಮಾಡಿಸಬೇಕೆಂದು ಒತ್ತಾಯಿಸಿದರು.
203 ಎಕರೆ ಪ್ರದೇಶ ಜಮೀನು ಮುಳುಗಡೆಯಾಗುವುದಿಲ್ಲವಾದರೂ ಅದು ಸರ್ವೇ ವರದಿಯಲ್ಲಿ ಸೇರಿದೆ ಎಂದರಲ್ಲದೆ, ನಿಮ್ಮ ಕಚೇರಿಯಲ್ಲಿ ಯಾರ‌್ಯಾರಿಗೆ ಹಣ ಸಂದಾಯವಾಗಿದೆ ಎಂದು ದಾಖಲೆ ಕೇಳಿದರೆ ಯಾರೂ ಕೊಡುತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ವರದಿಯಲ್ಲಿನ ಲೋಪದೋಷಗಳನ್ನು ಪರಿಶೀಲಿಸಿ ಕ್ರಮ ಜರುಗಿಸುವುದಾಗಿ ತಹಸೀಲ್ದಾರ್ ಸದಾಶಿವ ಮಕ್ಕೋಜಿ ತಿಳಿಸಿದರು.
ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ಶನಿವಾರ ಕಚೇರಿಯಲ್ಲಿ ಕುಳಿತು ನಿಜವಾದ ಲಾನುಭವಿಗಳಿಗೆ ಅನ್ಯಾಯವಾಗದಂತೆ ಕ್ರಮ ಜರುಗಿಸಿ ಅದಕ್ಕೆ ಪೂರಕವಾಗುವಂತೆ ಪರಿಶೀಲನೆ ಮಾಡಿ ಎಂದು ತಹಸೀಲ್ದಾರರಿಗೆ ಸೂಚಿಸಿದರು.
ಸುರೇಶಗೌಡ ಪಾಟೀಲ, ಸಾಗರ ಪಾಟೀಲ, ನಿಂಗಪ್ಪ ಬಳೊಲ, ಬಸವರಾಜ ಕಣಬೂರ, ಶಿಕಂದರ ನದಾಫ್, ಶ್ರೀಶೈಲ ದಳವಾಯಿ, ಮಲ್ಲಪ್ಪ ಕೆಂಪನವರ, ಉಮೇಶ ಪಾಟೀಲ, ಅನ್ನಪ್ಪ ಅಂಬಿ ಇತರರಿದ್ದರು.