

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚಪ್ಪನಹಳ್ಳಿ ಗ್ರಾಮ ಇದೀಗ ಶಾಪಗ್ರಸ್ಥವಾಗಿದೆ, ಕಳೆದೆರಡು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲಿ ಕಾಲ ಕಳೆಯುವ ಜತೆಗೆ ಕುಡಿವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಣ್ಣ ಮಳೆಯಾದರೂ ಇಂಥ ಪರಿಸ್ಥಿತಿ ಪುನಾವರ್ತನೆಯಾಗುವ ಈ ಗ್ರಾಮದ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗಾಗಲಿ ಅಥವಾ ಅಧಿಕಾರಿಗಳಿಗಾಗಲೀ ಯಾವುದೇ ಕಾಳಜಿ ಇಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.
ವಿದ್ಯುತ್ ಕಂಬ ಉರುಳಿದ್ದೇ ಕಾರಣ:
ಕಳೆದ ಮೂರು ದಿನದ ಹಿಂದೆ ಈ ಭಾಗದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಗ್ರಾಮಕ್ಕೆ ಪ್ರಮುಖ ಸಂಪರ್ಕವಾಗಿರುವ ವಿದ್ಯುತ್ ಕಂಬವೊಂದು ಧರೆಗುರುಳಿದಿದೆ. ಪರಿಣಾಮವಾಗಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಳೆ ಕಾರಣದಿಂದ ವಿದ್ಯುತ್ ಕಂಬ ಉರುಳಿದೆ ಮಳೆ ನಿಂತ ಬಳಿಕ ಇದನ್ನು ದುರಸ್ತಿ ಮಾಡುತ್ತಾರೆ ಎಂದು ಕಾದು ಕುಳಿತ ಗ್ರಾಮಸ್ಥರಿಗೆ ಬೆಸ್ಕಾಂ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಈಗ ಬರುತ್ತೇವೆ ಆಗ ಬರುತ್ತೇವೆ ಎಂದು ಕಾಲಹರಣ ಮಾಡುತ್ತಾ ಕಳೆದ ಎರಡುವ ದಿನಗಳಿಂದ ಇತ್ತ ಕಡೆ ಯಾವ ಬೆಸ್ಕಾಂ ಸಿಬ್ಬಂದಿಯೂ ಸುಳಿದಿಲ್ಲ. ನೆರಕ್ಕುರಳಿದ ಕಂಬ ಹಾಗೇ ಉಳಿದಿದೆ. ಅದನ್ನು ದುರಸ್ತಿಪಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವ ಗೋಜಿಗೆ ಹೋಗಿಲ್ಲ. ಪರಿಣಾಮವಾಗಿ ಕಳೆದೆರಡು ದಿನಗಳಿಂದ ಇಡೀ ಗ್ರಾಮ ಕತ್ತಲಲ್ಲಿ ಮುಳುಗಿದೆ. ರಾತ್ರಿ ವೇಳೆ ಹೊಲಗದ್ದೆಗಳ ಕಡೆ ಹೋಗಲೂ ಸಾಧ್ಯವಾಗದೆ ರೈತರು ಪರದಾಡುವಂತಾಗಿದೆ.
ಕುಡಿಯುವ ನೀರಿಗೂ ಪರದಾಟ: ವಿದ್ಯುತ್ ಕಡಿಗೊಂಡ ಹಿನ್ನೆಲೆಯಲ್ಲಿ ಗ್ರಾಮಕ್ಕೆ ನೀರು ಪೂರೈಸುವ ಕೊಳವೆಬಾವಿಗಳೂ ಬಂದ್ ಆಗಿವೆ, ಪರಿಣಾಮವಾಗಿ ಕುಡಿಯುವ ನೀರಿಗೂ ಪರದಾಡುವಂತಾಗಿದೆ, ಪಕ್ಕದ ಊರಿಗೆ ಬಿಂದಿಗೆ ಹಿಡಿದುಕೊಂಡು ಕುಡಿವ ನೀರು ತರುವಂತಾಗಿದೆ. ಇದರ ಜತೆಗೆ ದಿನನಿತ್ಯ ಬಳಕೆ ನೀರಿಗೆ ತತ್ಪಾವಾಗಿದ್ದು ಪರಿಸ್ಥಿತಿ ಬಿಗಡಾಯಿಸಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ದನಕರುಗಳಿಗೆ ನೀರು ಕುಡಿಸಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ, ಅಧಿಕಾರಿಗಳ ಈ ನಿರ್ಲಕ್ಷ್ಯದಿಂದ ಗ್ರಾಮ ಶಾಪಗ್ರಸ್ಥವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಂಬ ಎತ್ತಲು ಆಗುತ್ತಿಲ್ಲ: ಮಳೆಯಿಂದ ಕಾಲುವೆಯಲ್ಲಿ ನೀರು ಹರಿಯುತ್ತಿದ್ದು, ಮುರಿದು ಬಿದ್ದಿರುವ ವಿದ್ಯುತ್ ಕಂಬ ಎತ್ತಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ತಕ್ಷಣ ದುರಸ್ತಿ ಕಷ್ಟಸಾಧ್ಯ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ, ಗ್ರಾಮಕ್ಕೆ ಬೇರೆ ಮಾರ್ಗದ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ಹೇಳಿ ಸಾಗ ಹಾಕುತ್ತಿದ್ದಾರೆ ಆದರೆ ವಿದ್ಯುತ್ ಸಂಪರ್ಕ ಮಾತ್ರ ಸಿಕ್ಕಿಲ್ಲ ಪರಿಸ್ಥಿತಿ ಹೀಗೆ ಮುಂದುವರೆದರೆ ಬೆಸ್ಕಾಂ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
3 ದಿನಗಳಿಂದ ಸುರಿದ ಮಳೆಯ ಅವಾಂತರದಿಂದ ವಿದ್ಯುತ್ ಕಂಬ ನೆಲಕ್ಕೆ ಉರುಳಿದ್ದು, ಗ್ರಾಮದಲ್ಲಿ ವಿದ್ಯುತ್ ಸರಬರಾಜು ಇಲ್ಲದಂತಾಗಿದೆ. ಅಲ್ಲದೇ 3 ದಿನದಿಂದ ಗ್ರಾಮದಲ್ಲಿ ಕುಡಿಯುವ ನೀರಿಲ್ಲದೇ ಜನ ಪರಿದಾಡುತ್ತಿದ್ದಾರೆ. ಮರದ ಮೇಲೆ ಬಿದ್ದಿರುವ ಕಂಬವನ್ನು ಎತ್ತಿ ಸರಿಪಡಿಸುವ ಕೆಲಸ ಮಾಡುತ್ತಿಲ್ಲ ಹಲವು ಬಾರಿ ಈ ಬಗ್ಗೆ ದೂರು ನೀಡಿದರೂ ಯಾವೊಬ್ಬ ಅಧಿಕಾರಿಯೂ ಈ ಬಗ್ಗೆ ಗಮನ ನೀಡುತ್ತಿಲ್ಲ.
ಎಸ್.ಸುಧಾಕರ್ ಗ್ರಾಪಂ ಸದಸ್ಯ