

ಹಿರಿಯೂರು: ಮತದಾರರ ನಿರೀಕ್ಷೆಗೆ ತಕ್ಕಂತೆ ಜನಪರ ಸೇವೆ, ಅಭಿವೃದ್ಧಿ ಕಾರ್ಯ ಮಾಡಿದರೆ ಮಾತ್ರ ಜನರ ಪ್ರೀತಿ ವಿಶ್ವಾಸಗಳಿಸಲು ಸಾಧ್ಯ ಎಂದು ಜಿಲ್ಲಾ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ಬೆಸ್ಕಾಂ ಇಲಾಖೆ ಆವರಣದಲ್ಲಿ ಶುಕ್ರವಾರ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜತೆ, ಅಭಿವೃದ್ಧಿ ಕಾರ್ಯಕ್ಕೆ ಅಗತ್ಯ ಅನುದಾನ ಮೀಸಲಿಡಲಾಗುವುದು. ಕುಡಿವ ನೀರು, ಶಿಕ್ಷಣ, ವಸತಿ, ನೀರಾವರಿ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು.
ತಾಲೂಕಿನ ಪ್ರಜ್ಞಾವಂತ ಮತದಾರರು ನನ್ನ ಜನಪರ ಕೆಲಸ, ಅಭಿವೃದ್ಧಿ ಪರ ಚಿಂತನೆ ಮೆಚ್ಚಿ 92 ಸಾವಿರ ಮತ ನೀಡಿದ್ದು, ಜನರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ.
ಧರ್ಮಪುರ ಫೀಡರ್ ನಾಲೆ 2 ನೇ ಹಂತದ ಯೋಜನೆ, ಜೆ.ಜಿ. ಹಳ್ಳಿ- ಕಲುವಳ್ಳಿ ಭಾಗಕ್ಕೆ ಶಾಶ್ವತ ನೀರಾವರಿ ಸೌಲಭ್ಯ, ಡೆಡ್ ಸ್ಟೋರೇಜ್ ತಲುಪಿರುವ ಗಾಯತ್ರಿ ಜಲಾಶಯಕ್ಕೆ ಯಾವುದಾದರೂ ಮೂಲದಿಂದ ನೀರು ತುಂಬಿಸಲು ಯೋಜನೆ ರೂಪಿಸಲಾಗುತ್ತಿದ್ದು, ಕುಡಿವ ನೀರು, ಶಿಕ್ಷಣ, ವಸತಿ ನೀರಾವರಿಗೆ ಹೆಚ್ಚು ಅನುದಾನ ಮೀಸಲಿಡಲಾಗುವುದು ಎಂದು ತಿಳಿಸಿದರು.
ಕೃಷಿ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ, ಸಕಾಲದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ, ಬೆಸ್ಕಾಂನಲ್ಲಿ ಖಾಲಿ ಇರುವ ಪವರ್‌ಮ್ಯಾನ್ ಹುದ್ದೆ ಭರ್ತಿಗೆ ಕ್ರಮ ವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಬೆಸ್ಕಾಂ ಇಇ ರಾಮಚಂದ್ರ ಸುತಾರ್, ಎಇಇಗಳಾದ ಪೀರ್‌ಸಾಬ್, ತಿಮ್ಮರಾಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ವಕೀಲ ಶಿವಕುಮಾರ್, ಗುರುಪ್ರಸಾದ್, ಜ್ಞಾನೇಶ್, ಮುಸ್ತಾಕ್, ಮಂಜುನಾಥ್, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ಜ್ಞಾನೇಶ್ ಇತರರಿದ್ದರು.