

ಮದ್ದೂರು: ಕೊನೇ ಆಷಾಢ ಶುಕ್ರವಾರದ ಪ್ರಯುಕ್ತ ಜು.13 ರಂದು ಇತಿಹಾಸ ಪ್ರಸಿದ್ಧ ಬೆಸಗರಹಳ್ಳಿ ಗ್ರಾಮದ ಗ್ರಾಮ ದೇವತೆ ಶ್ರೀ ಎಲ್ಲಮ್ಮತಾಯಿ ದೇವರ 7ನೇ ವರ್ಷದ ಪೂಜಾ ಮಹೋತ್ಸವ ಸಂಭ್ರಮದಿಂದ ನಡೆಯಲಿದೆ.
ಅಂದು ಬೆಳಗ್ಗೆ 8 ಗಂಟೆಗೆ ದೇಗುಲದ ಆವರಣದಲ್ಲಿ ಗಣಪತಿ ಪೂಜೆ, ಪುಣ್ಯಾಹ, ನವಗ್ರಹ ಪೂಜೆ, ದೇವಿಯವರ ಕವಚ ಶುದ್ದಿ, ಪಂಚಗವ್ಯ ಮೇಳ, ಗಣಪತಿ, ನವಗ್ರಹ, ಚಂಡಿಕಾ ಹೋಮ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಸಂಜೆ 4 ಗಂಟೆಗೆ ಪುಣ್ಯಾಹ ಕಳಶಾರಾಧನೆ, ಹೂ, ಹೊಂಬಾಳೆ ತರವುದು ಮತ್ತು ಮೀಸಲು ನೀರು ತರುವುದು ನಂತರ ಮಹಾ ಮಂಗಳಾರತಿ ನಡೆಯಲಿದೆ. ಬಳಿಕ ತೀರ್ಥ ಪ್ರಸಾದ ವಿನಿಯೋಗಿಸಲಾಗುವುದು. ರಾತ್ರಿ 7.30 ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಪೂಜಾ ಮಹೋತ್ಸವ ನಡೆಯಲಿದೆ. ಜು. 14 ರಂದು ಮಧ್ಯಾಹ್ನ 12 ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದರು.
ವಿಧಿವಿಧಾನಗಳಂತೆ ಧಾರ್ಮಿಕ ಕಾರ್ಯ ನಡೆಸಲಾಗುವುದು. ದೇವರ ಮೂಲ ವಿಗ್ರಹಕ್ಕೆ ಬಗೆ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗುವುದು. ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ದೇವರ ಉತ್ಸವಕ್ಕೆ ಭಾಗವಹಿಸಲಿದ್ದಾರೆ ಎಂದು ದೇಗುಲದ ಪ್ರಧಾನ ಅರ್ಚಕ ಬಿ.ಆರ್.ಸತ್ಯನಾರಾಯಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.