ಪರಿಶುದ್ಧ ಸಂಕಲ್ಪವಿದ್ದರೆ ದೇವರ ಫಲ ಪ್ರಾಪ್ತಿ

2ald 1darmika
ಮಾಚಗೊಂಡನಹಳ್ಳಿಯ ಬೇರುಗಂಡಿ ಬೃಹನ್ಮಠದಲ್ಲಿ ಶ್ರಾವಣ ಮಾಸದ ಮುಕ್ತಾಯ ಪೂಜೆಯ ಅಂಗವಾಗಿ ಏಕಾದಶಹೋಮ, ರುದ್ರಹೋಮ ಜರುಗಿತು. ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಪಂಡಿತಾರಾಧ್ಯ ಶಾಸ್ತ್ರಿ ಇದ್ದರು.
Published on

ಆಲ್ದೂರು: ಕೋಟಿ ಗೋವುಗಳ ಮಧ್ಯೆ ಕರುವನ್ನು ಬಿಟ್ಟರೆ ಅದು ತನ್ನ ತಾಯಿ ಹುಡುಕಿಕೊಂಡು ಹೋಗುವಂತೆ ನಿಷ್ಕಲ್ಮಶ ಭಕ್ತಿಗೆ ದೇವರು ಒಲಿಯುತ್ತಾನೆ ಎಂದು ಬೇರುಗಂಡಿ ಬೃಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಮಾಚಗೊಂಡನಹಳ್ಳಿಯ ಬೇರುಗಂಡಿ ಬೃಹನ್ಮಠದಲ್ಲಿ ಸೋಮವಾರ ಶ್ರಾವಣ ಮಾಸ ಪೂಜೆಯ ಮುಕ್ತಾಯ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಪರಿಶುದ್ಧ ಮನಸ್ಸಿನ ಸಂಕಲ್ಪವಿದ್ದರೆ ಕ್ಷಣ ಮಾತ್ರದಲ್ಲಿ ನಿಮ್ಮ ಪ್ರಾರ್ಥನೆ ದೇವರಿಗೆ ಸಲ್ಲುತ್ತದೆ ಎಂದರು.
ಧರ್ಮ ಮೌಲ್ಯಗಳು ಅಭಿವೃದ್ಧಿಯಾಗಬೇಕು ಎಂದರೆ ನಿಮ್ಮ ಮನಸ್ಸು ವಿಶಾಲತೆ ಹೊಂದಬೇಕು. ಸುತ್ತಲಿನ ಭಕ್ತರು ಮಠದ ಬಗ್ಗೆ ಅಪಾರ ಗೌರವ ಅಭಿಮಾನ ಹೊಂದಿದ್ದು ಎಲೆ ಮರೆಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ. ಮಠದ ಭಕ್ತರ ಕೆಲಸ ಕಾರ್ಯಗಳು ಯಶಸ್ಸಿಯಾಗಲಿ, ಅವರ ಮನೆಗಳು ಅಭಿವೃದ್ಧಿ ಹೊಂದಲಿ. ಸಿದ್ದೇಶ್ವರ ಸ್ವಾಮಿ ಸನ್ನಿಧಾನಕ್ಕೆ ಇನ್ನೂ ಹೆಚ್ಚಿನ ಭಕ್ತರು ಬಂದು ಸೇವೆ ಸಲ್ಲಿಸಲಿ ಎಂಬ ಸಂಕಲ್ಪದಿಂದ ಪೂಜೆ ಸಲ್ಲಿಸಲಾಗಿದೆ ಎಂದು ಶುಭ ಹಾರೈಸಿದರು.
ಸಮಾಜದ ಹಲವು ಪುರೋಹಿತ ವರ್ಗ ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರ ಸೇ ಗುರುತಿಸಿ ಮಠದಿಂದ ಗೌರವಿಸಲಾಗುತ್ತಿದೆ. ಪಂಡಿತಾರಾಧ್ಯ ಶಾಸಿಗಳು 4 ವಿಷಯಗಳಲ್ಲಿ ಗೌರವ ಡಾಕ್ಟರೇಟ್ ಪಡೆದಿದ್ದು ಅವರ ಕೊಡುಗೆ ಗುರುತಿಸಿ ಗೌರವಿಸಲಾಗುತ್ತಿದೆ ಎಂದರು.
ಮಠದ ಅಭಿವೃದ್ಧಿಗೆ ಶ್ರಮಿಸಿದ ಭುವನೇಶ್ವರಿ ಶಿವರಾಜ್ ಆಗನಿ, ವಿಜಯ್ ಕುಮಾರ್,ಪಂಡಿತಾರಾಧ್ಯ ಶಾಸ್ತ್ರಿಗಳು, ವೀರಶೈವ ಸಮಾಜದ ಹೋಬಳಿ ಅಧ್ಯಕ್ಷ ಮಹೇಶ್, ಮಾಜಿ ಅಧ್ಯಕ್ಷ ಉಮೇಶ್, ದಾನಿಗಳಾದ ಧರ್ಮೇಶ್, ಭಗತ್, ಬಾಬಣ್ಣ ಅವರನ್ನು ಗೌರವಿಸಲಾಯಿತು. ಪಂಡಿತಾರಾಧ್ಯ ಶಾಸ್ತ್ರಿಗಳು ಹಾಗೂ ದರ್ಶನ್ ಶಾಸ್ತ್ರೀಗಳಿಂದ ಏಕಾದಶಹೋಮ, ರುದ್ರಹೋಮ ಪೂಜೆಗಳು ಜರುಗಿದವು. ಕಾರ್ಯಕ್ರಮದಲ್ಲಿ ಉಮೇಶ್, ಶಿವರಾಜ್,ಧರ್ಮೆಶ್, ಗಂಗಾಧರಯ್ಯ, ರಾಜೀವ್ ಹಾಗೂ ಸುತ್ತಮುತ್ತಲಿನ ನೂರಾರು ಭಕ್ತರು ಭಾಗವಹಿಸಿದ್ದರು. ಶ್ರಾವಣ ಮಾಸದ ಮುಕ್ತಾಯ ಪೂಜೆ ನಿಮಿತ್ತ ಸಿದ್ದೇಶ್ವರ ಸ್ವಾಮಿಗೆ, ಚೌಡೇಶ್ವರಿ ಅಮ್ಮನವರಿಗೆ ,ರೇಣುಕಾಚಾರ್ಯರಿಗೆ ವಿಶೇಷ ಪೂಜೆಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net