ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಿ, ಅಭಿವೃದ್ಧಿ ಪಡಿಸಿ

30myk1a
Published on

ಮಾಯಕೊಂಡ: ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಇಲಾಖೆ ಅಧಿಕಾರಿಗಳ ಜತೆಗೆ ಪಾಲಕರು ಮತ್ತು ಗ್ರಾಮಸ್ಥರ ಸಹಕಾರ ಅತ್ಯಗತ್ಯ ಎಂದು ದಾವಣಗೆರೆ ಉತ್ತರ ವಲಯದ ಬಿಇಒ ಶೇರ್ ಅಲಿ ಹೇಳಿದರು.

ಮಾಯಕೊಂಡ ಸಮೀಪದ ಓಬಣ್ಣನಹಳ್ಳಿ ಗ್ರಾಮದಲ್ಲಿ ಶುಕ್ರವಾರ 16 ವರ್ಷಗಳಿಂದ ಮುಚ್ಚಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಾಗಿಲನ್ನು ತೆರೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರಿ ಶಾಲೆ ಎಂದು ನಿರ್ಲಕ್ಷ್ಯ ಮಾಡಬಾರದು, ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುವ ಮೂಲಕ ಅದರ ಉಳಿವಿಗೆ ಮತ್ತು ಅಭಿವೃದ್ಧಿಗೆ ಸಹಕರಿಸಬೇಕು. ಸರ್ಕಾರಿ ಶಾಲೆ ಮಾದರಿ ಶಾಲೆ ಆಗುವವರೆಗೆ ಶ್ರಮಿಸಬೇಕು ಎಂದರು.

ಇಂದಿನಿಂದ ಶಾಲೆ ಮತ್ತೆ ಪ್ರಾರಂಭಗೊಂಡಿದ್ದು ಪಕ್ಕದ ನರಗನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯನ್ನು ನಿಯೋಜನೆ ಮಾಡಲಾಗಿದೆ. ಸುಮಾರು ಹದಿನಾರು ವರ್ಷಗಳ ಕಾಲ ಶಾಲಾ ಕಟ್ಟಡಕ್ಕೆ ಬೀಗ ಹಾಕಿದ್ದರಿಂದ ಸದ್ಯ ಮೇಲ್ಛಾವಣಿ, ಅಡುಗೆ ಮನೆ, ಶೌಚಗೃಹಗಳ ದುರಸ್ತಿ ಮಾಡಲಾಗುವುದು. ನಂತರ ಸುಣ್ಣ ಬಣ್ಣದ ಹಚ್ಚಿ ಉತ್ತಮ ವಾತಾವರಣದಲ್ಲಿ ಕಲಿಕೆಗೆ ವ್ಯವಸ್ಥೆ ಮಾಡಿಕೊಡಲಾಗುವುದು. ದುರಸ್ತಿ ಕಾರ್ಯ ನಡೆಯುವವರೆಗೂ ಗ್ರಾಪಂ ಗ್ರಂಥಾಲಯದಲ್ಲಿ ಪಾಠದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಬಿಆರ್​ಸಿ ಪಸಿಉದ್ದೀನ್ ಶಾಕೀರ್ ಮಾತನಾಡಿ, ಸರ್ಕಾರಿ ಶಾಲೆಗಳ ಕನ್ನಡ ಮಾಧ್ಯಮ ಶಿಕ್ಷಣ ಪಂಚಾಮೃತ ಇದ್ದಹಾಗೆ, ಪಾಲಕರು ಕಾಳಜಿ ವಹಿಸಿ ಈ ಶಾಲೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಉಳಿಸಿ ಬೆಳೆಸಬೇಕು. ಮಕ್ಕಳಿಗೆ ಪ್ರಾಥಮಿಕ ಹಂತದಿಂದ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಕೊಡಿಸುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದರು.

ನರಗನಹಳ್ಳಿ ಗ್ರಾಪಂ ಪಿಡಿಒ ಹಿಮವಂತ್ ರಾಜ್ ಮಾತನಾಡಿ, 16 ವರ್ಷಗಳ ನಂತರ ಆರಂಭವಾಗುತ್ತಿರುವ ಈ ಶಾಲೆಯ ಅಭಿವೃದ್ಧಿಗೆ ಗ್ರಾಪಂ ನಿಂದ ಕಾಂಪೌಂಡ್ ನಿರ್ವಣ, ಹೈಟೆಕ್ ಶೌಚಗೃಹ ಸೇರಿ ಇತರ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಶ್ವನಾಥ್, ಕೆಆರ್​ಎಸ್ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಮಾತನಾಡಿದರು.

ಶಿಕ್ಷಕಿ ಶಶಿಕಲಾ ಪ್ರಾರ್ಥಿಸಿದರು. ಹೆಬ್ಬಾಳು ಕ್ಲಸ್ಟರ್ ಸಿಆರ್​ಪಿ ಮಧುಸೂದನ್ ಸ್ವಾಗತಿಸಿದರು. ಬಾವಿಹಾಳು ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎನ್. ಲೋಕಪ್ಪ ನಿರೂಪಿಸಿದರು.

ನರಗನಹಳ್ಳಿ ಗ್ರಾಪಂ ಅಧ್ಯಕ್ಷೆ ಆಶಾ ನಾಗರಾಜ್, ಗ್ರಾಪಂ ಸದಸ್ಯ ಡಿ.ಎನ್. ಚಂದ್ರಶೇಖರ್, ಮುಖಂಡರಾದ ಹನುಮಂತಪ್ಪ ಮಲ್ಲೇಶ್, ಡಿ.ಕೆ. ರಮೇಶ್, ಗೌಡ್ರ ದೇವೇಂದ್ರಪ್ಪ, ರಮೇಶ್, ವಿಶ್ವನಾಥ್, ರಸೂಲ್, ಬಸರಾಜಪ್ಪ, ಕೆಆರ್​ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ವೀರಭದ್ರಪ್ಪ, ಪಾಲಕರು, ಮಕ್ಕಳು ಹಾಗೂ ಗ್ರಾಮಸ್ಥರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net