

ಶ್ರೀರಂಗಪಟ್ಟಣ: ತಾಲೂಕಿನ ಕೇಂಬ್ರಿಡ್ಜ್ ಶಾಲೆಯ ವಿದ್ಯಾರ್ಥಿಗಳ ಪಾಲಕರು ಹಾಗೂ ವಿವಿಧ ಗ್ರಾಮಗಳ ಗ್ರಾಮಸ್ಥರು ಜಾನುವಾರುಗಳೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಶಾಲಾ ಆಡಳಿತ ಹಾಗೂ ಬಿಇಒ ವಿರುದ್ಧ ಪ್ರತಿಭಟನೆ ನಡೆಸಿದರು.
ಪಟ್ಟಣದಲ್ಲಿರುವ ಕಚೇರಿಗೆ ಶುಕ್ರವಾರ ಮಂಡ್ಯ ರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಗಳೊಂದಿಗೆ ತೆರಳಿದ ಪ್ರತಿಭಟನಕಾರರು ಕಳೆದ 14 ದಿನಗಳಿಂದ ಕೇಂಬ್ರಿಡ್ಜ್ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಬೀದಿಗೆ ಬಿದ್ದಿದ್ದರೂ ಯಾವುದೇ ಅಗತ್ಯ ಕ್ರಮ ಕೈಗೊಳ್ಳದ ಶಿಕ್ಷಣ ಅಧಿಕಾರಿ ಲೋಪದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್‌ಬಾಬು ಮಾತನಾಡಿ, ತಾಲೂಕಿನ ಹಳೇ ಕಿರಂಗೂರು ಗ್ರಾಮದಲ್ಲಿರುವ ಕೇಂಬ್ರಿಡ್ಜ್ ಶಾಲೆಯ ಮಾಲೀಕ ಮಾಡಿರುವ ಕೋಟ್ಯಂತರ ರೂ. ಸಾಲಕ್ಕೆ ಬ್ಯಾಂಕ್ ಶಾಲೆಯನ್ನು ಸೀಜ್ ಮಾಡಿದೆ. ಆದರೆ ಆ ಮಾಲೀಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತ್ವರಿತವಾಗಿ ಕಾರ್ಯಪ್ರವೃತ್ತನಾಗಿ ಬದಲಿ ವ್ಯವಸ್ಥೆ ಕಲ್ಪಿಸಿ ಜವಾಬ್ದಾರಿ ವಹಿಸಬೇಕಿತ್ತು. ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಆರಾಮಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನೀವಾದರೂ ಅಗತ್ಯ ಕ್ರಮ ಕೈಗೊಂಡು ಶಿಕ್ಷಣ ವಂಚಿತರಾಗಿ ಮನೆಯಲ್ಲೇ ಕುಳಿತ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಕ್ಷಣ ನೆರವಾಗಬೇಕಿತ್ತು. ಆದರೆ ನೀವೂ ಅವರೊಂದಿಗೆ ಸೇರಿ ಕೆಲ ಆಮಿಷಗಳಿಗೆ ಒಳಗಾಗಿ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದೀರಿ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪುರಸಭಾ ಸದಸ್ಯ ಎಸ್.ಪ್ರಕಾಶ್ ಹಾಗೂ ದರಸಗುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಂಪುರ ಮುರುಳಿ ಮೋಹನ್ ಮಾತನಾಡಿ, ವಿದ್ಯಾರ್ಥಿಗಳು ಶಾಲೆಯ ಶಿಕ್ಷಣದಿಂದ ವಂಚಿತರಾಗಿದ್ದರೂ ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತಂದು ನೀವೂ ಬದಲಿ ವ್ಯವಸ್ಥೆಗೆ ಮುಂದಾಗಿ ಶಿಕ್ಷಣ ಕೊಡಿಸದಿರುವುದು ಖಂಡನೀಯ. ಲಕ್ಷಾಂತರ ರೂ. ಕಟ್ಟಿದ್ದ ಅಲ್ಲಿನ ವಿದ್ಯಾರ್ಥಿಗಳ ಪಾಲಕರು ಶಾಲೆಯು ಇಂದು, ನಾಳೆ ತೆರೆಯಬಹುದು ಎಂದು ಕಾದು ಇದೀಗ ಆತಂಕಕ್ಕೆ ಸಿಲುಕಿ, ಮಕ್ಕಳೊಂದಿಗೆ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ನಾಶಕ್ಕೆ ನೀವೇ ಹೊಣೆ ಎಂದು ದೂರಿ ಶೀಘ್ರವೇ ಸರಿಪಡಿಸುವಂತೆ ಒತ್ತಾಯಿಸಿದರು.
ಕರವೇ ಅಧ್ಯಕ್ಷ ಚಂದಗಾಲು ಶಂಕರ್ ಮಾತನಾಡಿ, ಆ ಶಾಲೆಯ ಎಲ್ಲ ಮಕ್ಕಳು ಸೋಮವಾರ ಬೆಳಗ್ಗೆ ಶಾಲೆಯ ಕೊಠಡಿಗಳಲ್ಲಿ ಕುಳಿತು ಶಿಕ್ಷಣ ಪಡೆಯುವ ವ್ಯವಸ್ಥೆ ಕಲ್ಪಿಸದಿದ್ದಲ್ಲಿ, ಮುಂದೆ ಪಾಲಕರು ಹಾಗೂ ಸಂಘಟನೆಗಳೊಂದಿಗೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಬಳಿಕ ಪ್ರತಿಭಟನಕಾರರನ್ನು ಸಮಾಧಾನಪಡಿಸಿ ಮಾತನಾಡಿದ ಬಿಇಒ ಆರ್.ಪಿ.ಮಹೇಶ್, ಈಗಾಗಲೇ ಇಲಾಖೆಯ ಡಿಡಿಪಿಐ ಭೇಟಿ ನೀಡಿ ಪರಿಶೀಲಿಸಿ, ಸಮಸ್ಯೆ ಬಗೆಹರಿಸಿಕೊಂಡು ಶಾಲೆ ತೆರೆಯಲು ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಸೋಮವಾರದಿಂದ ಶಾಲೆ ತೆರೆದು ಮೊದಲಿನಂತೆ ತರಗತಿಗಳು ನಡೆಯಲು ಮೇಲಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ರೈತ ಮುಖಂಡ ಪಾಂಡು, ಮರವೇ ಸಂಘಟನಾ ಕಾರ್ಯದರ್ಶಿ ಜಗದೀಶ್‌ಗೌಡ, ಕೆಂಪೇಗೌಡ ಯುವ ಶಕ್ತಿ ಅಧ್ಯಕ್ಷ ಮಹೇಶ್, ಕಾಂಗ್ರೆಸ್ ಮುಖಂಡ ರಾಂಪುರ ಪುಟ್ಟು, ವಿದ್ಯಾರ್ಥಿಗಳ ಪಾಲಕರಾದ ದಸರಗುಪ್ಪೆ ಪಂಚಾಯಿತಿ ಸದಸ್ಯ ಶ್ರೀಧರ್, ಕಸಾಪ ನಗರ ಘಟಕ ಅಧ್ಯಕ್ಷೆ ಲಯನ್ ಸರಸ್ವತಿ, ಪ್ರದೀಪ್, ಪುಷ್ಪಲತಾ, ನಂದಿನಿ ಇದ್ದರು.